- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದಲ್ಲಿ ಖೋಟಾನೋಟು ಹಾವಳಿ: ಗ್ರಾಮೀಣಕ್ಕೂ ಬಂತು 200 ರೂ. ಖೋಟಾನೋಟು!

currency [1]ಸುಬ್ರಹ್ಮಣ್ಯ: ರಾಜ್ಯದಲ್ಲಿ ಖೋಟಾನೋಟು ಹಾವಳಿ ತೀವ್ರಗೊಂಡಿದೆ ಎನ್ನುವ ಆತಂಕದ ನಡುವೆಯೇ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಜಾಲ ಸಕ್ರಿಯವಾಗಿರುವ ಶಂಕೆ ಉಂಟಾಗಿದೆ.

ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ಬಡ ವ್ಯಾಪಾರಸ್ಥ ಮಹಿಳೆಯೊಬ್ಬರಿಂದ ಸಣ್ಣ ಪುಟ್ಟ ವಸುಗಳನ್ನು ಖರೀದಿಸಿ 200 ರೂ. ಮುಖ ಬೆಲೆಯ ನೋಟು ನೀಡಿ ತೆರಳಿದ್ದ. ನೋಟು ಪಡೆದ ಮಹಿಳೆ ತತ್‌ಕ್ಷಣ ಅದನ್ನು ಪರಿಶೀಲಿಸಿರಲಿಲ್ಲ. ಆದರೆ ವ್ಯಕ್ತಿ ಸ್ಥಳದಿಂದ ತೆರಳಿದ ಬಳಿಕ ಅವರಿಗೆ ನೋಟಿನ ಕುರಿತು ಅನುಮಾನ ಮೂಡಿದ್ದು, ಸೂಕ್ಷ್ಮವಾಗಿ ಗಮನಿಸಿದಾಗ ಖೋಟಾ ನೋಟು ಎನ್ನುವುದು ಖಚಿತವಾಗಿತ್ತು. ಇದೇ ರೀತಿ ಹಲವು ವ್ಯಾಪಾರಸ್ಥರು ವಂಚನೆ ಗೊಳಗಾಗಿರುವುದು ಸುಬ್ರ ಹ್ಮಣ್ಯದಲ್ಲಿ ಕೆಲವು ದಿನಗಳಲ್ಲಿ ನಡೆದಿದೆ.

ಖೋಟಾನೋಟು ಮೇಲ್ನೋಟಕ್ಕೆ ಅಸಲಿ ನೋಟಿನಂತೆ ಕಾಣಿಸುತ್ತದೆ. ಇದನ್ನು ನಕಲಿ ಮುದ್ರಿಸಲಾಗಿದೆಯೇ ಅಥವಾ ಜೆರಾಕ್ಸ್‌ ಮಾಡಲಾಗಿದೆಯೇ ಎನ್ನುವುದು ಖಚಿತವಾಗಿಲ್ಲ. ಅಸಲಿ ನೋಟಿನ ಭದ್ರತಾ ವೈಶಿಷ್ಟಗಳನ್ನು ಹೋಲುವ ಶೇ.90 ಅಂಶ ಈ ನೋಟಿನಲ್ಲಿವೆ. ಆದರೆ ಸಣ್ಣ ಅಕ್ಷರದ ಸ್ಕ್ರಿಪ್ಟ್, ನೋಟಿನ ಒಳಗಿನ ಹೊಳೆಯುವ ಪಟ್ಟಿ ಹಾಗೂ ಬಲಬದಿಯಲ್ಲಿ ಬೆಳಕಿಗೆ ಹಿಡಿದಾಗ ಮಾತ್ರ ಕಾಣಿಸುವ ಮಹಾತ್ಮಾ ಗಾಂಧಿ ಮೊದಲಾದವುಗಳು ಮಹಿಳೆಗೆ ದೊರಕಿದ ನಕಲಿ ನೋಟಿನಲ್ಲಿ ಇಲ್ಲ. ಇನ್ನುಳಿದಂತೆ ಮಧ್ಯಭಾಗದ ಗಾಂಧೀಜಿ ಭಾವಚಿತ್ರ, ಕೋಡ್‌ ಸಂಖ್ಯೆ, ಲಾಂಛನ, ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಮತ್ತು ಸ್ವತ್ಛ ಭಾರತ್‌ ಲಾಂಛನ ಸಹಿತ ಎಲ್ಲವೂ ಇದ್ದು, ಅಸಲಿ ನೋಟಿನಂತೆಯೇ ಕಂಡು ಬಂದಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಮಾನ್ಯವಾಗಿ ಪ್ರತಿದಿನವೂ ಜನಸಂದಣಿ ಇರುತ್ತದೆ. ಇಂತಹ ಸಂದರ್ಭ ಬಳಸಿ ಖೋಟಾನೋಟು ಚಲಾವಣೆಯನ್ನು ಕಿಡಿಗೇಡಿಗಳು ನಡೆಸುತ್ತಿದ್ದಾರೆ ಎಂಬ ಸಂದೇಹ ಮೂಡಿದೆ. ಕ್ಷೇತ್ರದ ರಸ್ತೆ ಬದಿ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರು, ಮಕ್ಕಳು ಇರುವ ಅಂಗಡಿಯವರನ್ನೇ ಗುರಿಯಾಗಿಸಿ ಕೃತ್ಯ ಎಸಗಲಾಗುತ್ತದೆ. ಜನಜಂಗುಳಿ ನಡುವೆ ಫ‌ಕ್ಕನೆ ನೋಟು ಪರಿಶೀಲಿಸುವ ಗೋಜಿಗೆ ಹೋಗದ ವ್ಯಾಪಾರಸ್ಥರು ವಂಚನೆಗೆ ತುತ್ತಾಗುತ್ತಾರೆ.

ಕುಕ್ಕೆ ಸುಬ್ರಹ್ಮಣದಲ್ಲಿ ಹಲವು ವರ್ಷಗಳ ಹಿಂದೆ ಇದೇ ರೀತಿ ಹೊರಗಿನಿಂದ ಬಂದ ಕಳ್ಳನೋಟು ಚಲಾವಣೆ ಜಾಲವೊಂದು ಸಕ್ರಿಯವಾಗಿತ್ತು. ಸ್ಥಳೀಯ ದಿನಸಿ ಅಂಗಡಿ ಮಾಲಕರೊಬ್ಬರು ಮೋಸ ಹೋದ ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಖೋಟಾ ನೋಟು ಚಲಾಯಿಸಿದಾತ ಸೆರೆಯಾಗಿದ್ದ. ಪ್ರಕರಣದ ವಿಚಾರಣೆಯ ಸಂದರ್ಭ ಕ್ಷೇತ್ರದ ಇಪ್ಪತ್ತಕ್ಕೂ ಅಧಿಕ ಮಂದಿ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿದಿದ್ದರು. ಆರೋಪಿಗಳಿಗೆ ಶಿಕ್ಷೆಯೂ ಆಗಿತ್ತು.

ನಕಲಿ ನೋಟು ಹಾವಳಿ ಕುರಿತು ಇದು ವರೆಗೆ ದೂರು ಬಂದಿಲ್ಲ. ಮೋಸ ಹೋದ ವ್ಯಕ್ತಿಗಳು, ವ್ಯಾಪಾರಸ್ಥರು ದೂರು ನೀಡಿದಲ್ಲಿ ತನಿಖೆಗೆ ಅನುಕೂಲವಾಗುತ್ತದೆ. ದೂರು ನೀಡಲು ಹಿಂದೇಟು ಹಾಕಿದಲ್ಲಿ ತನಿಖೆಗೆ ಕಷ್ಟ. ಈಗ ನಡೆದ ಖೋಟಾನೋಟು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಸಂಗ್ರಹಿಸುತ್ತೇವೆ.