- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಒಂದು ಲಕ್ಷ ಕುಟುಂಬಗಳಿಗೆ ಸಿಲಿಂಡರ್​, ಸ್ಟವ್​​ ವಿತರಣೆ: ಸಚಿವ ಜಮೀರ್ ಅಹ್ಮದ್

zameer-ahmed [1]ಬೆಂಗಳೂರು: ಬಡತನದ ರೇಖೆಗಿಂತ ಕೆಳಗಿರುವ ಒಂದು ಲಕ್ಷ ಕುಟುಂಬಗಳಿಗೆ ಡಿಸೆಂಬರ್ 15 ರೊಳಗೆ ಸಿಲಿಂಡರ್ ಮತ್ತು ಸ್ಟವ್ಗಳನ್ನು ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರತಿ ಕುಟುಂಬಕ್ಕೆ 4,450 ರೂ. ವೆಚ್ಚದಲ್ಲಿ ಎರಡು ಸಿಲಿಂಡರ್, ಒಂದು ಸ್ಟವ್ ಮತ್ತು ರೆಗ್ಯುಲೇಟರ್‌ಗಳನ್ನು ನೀಡಲಾಗುವುದು. ಈಗಾಗಲೇ 4 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ನಾಲ್ಕು ಲಕ್ಷ ಕುಟುಂಬಳಿಗೆ ಸರ್ಕಾರದ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ಕಳೆದ ವರ್ಷವೇ ಒಂದು ಲಕ್ಷ ಸಾಮಾಗ್ರಿಗಳನ್ನು ಖರೀದಿ ಮಾಡಲಾಗಿದೆ. ಅವುಗಳನ್ನು ವಿತರಿಸುವುದಷ್ಟೇ ಬಾಕಿ ಇದೆ. ಪಡಿತರ ಅಂಗಡಿಗಳಲ್ಲಿ ಬಯೋ ಮೆಟ್ರಿಕ್ ಅಳವಡಿಸಿದ ನಂತರ ರಾಜ್ಯ ಸರ್ಕಾರಕ್ಕೆ ವಾರ್ಷಿಕ 580 ಕೋಟಿ ರೂ. ಉಳಿತಾಯವಾಗಿದೆ. ಇದುವರೆಗೂ ಒಂದು ಕೋಟಿ ಮುವತ್ತೊಂದು ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಿದ್ದು, ಮತ್ತೆ 6.25 ಲಕ್ಷ ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು.

ಒತ್ತಡ ಹಾಕಿ ಅನುದಾನ ತೆಗೆದುಕೊಳ್ಳುತ್ತಾರೆಂಬ ಬಿಜೆಪಿ ನಾಯಕರ ಆರೋಪಕ್ಕೆ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು. ಹಾಸನ ಅಥವಾ ಮಂಡ್ಯಕ್ಕೆ ಮಾತ್ರ ಸಿಎಂ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರಾ?. ಅನುದಾನ ಕೊಡುವುದಿಲ್ಲವೆಂದು ಸಿಎಂ ಎಲ್ಲೂ ಹೇಳಿಲ್ಲ ಎಂದರು.

ಸಚಿವ ಹೆಚ್.ಡಿ. ರೇವಣ್ಣ ಅವರು ಒತ್ತಡ ಹಾಕಿ ಅನುದಾನ ತೆಗೆದುಕೊಂಡು ಹೋಗುತ್ತಾರೆ. ಹಾಸನ ಜಿಲ್ಲೆಗೆ ಮೆಡಿಕಲ್ ಕಾಲೇಜುಗಳನ್ನು ಒತ್ತಡ ಹಾಕಿ ಮಾಡಿಸಿಕೊಂಡಿದ್ದಾರೆ ಎಂದೆಲ್ಲಾ ಬಿಜೆಪಿಯವರು ಆರೋಪ ಮಾಡಿದ್ದಾರೆ. ಒತ್ತಡ ಹಾಕಿ ಅನುದಾನ ತೆಗೆದುಕೊಳ್ಳುವುದು ಅವರವರ ಜವಾಬ್ದಾರಿ ಎಂದರು.

ನನಗೂ ಹಾವೇರಿ ಜಿಲ್ಲೆಗೆ ಅನುದಾನ ಬೇಕು. ವಕ್ಫ್ ಆಸ್ತಿಗೆ ಕಾಂಪೌಂಡ್ ನಿರ್ಮಿಸಲು 500 ಕೋಟಿ ರೂ. ಬೇಕಾಗಿದೆ. ಆದಷ್ಟು ಶೀಘ್ರ 100 ಕೋಟಿ ರೂ. ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ರೇವಣ್ಣ ಸ್ಟ್ರಾಂಗ್ ಇದ್ದಾರೆ. ಒತ್ತಡ ಹಾಕಿ ಅನುದಾನ ತೆಗೆದುಕೊಂಡು ಹೋಗುತ್ತಾರೆ ಎಂದು ಹಾಸ್ಯವಾಗಿ ಹೇಳಿದರು.