- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಂದು ಕೆಸಿಆರ್​ಗೆ ಪಟ್ಟಾಭಿಷೇಕ… ಎರಡನೇ ಬಾರಿ ಸಿಎಂ ಆಗಿ ಪ್ರಮಾಣವಚನ

chandrashekar-rao [1]ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಕೆ. ಚಂದ್ರಶೇಖರ ರಾವ್ ಅವರು ಇಂದು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಲಿದ್ದಾರೆ.

ಅವಧಿಗೆ ಮುನ್ನ ವಿಧಾನಸಭೆ ವಿಸರ್ಜಿಸಿಯೂ ತೆಲಂಗಾಣದಲ್ಲಿ ಬಹುಮತ ಪಡೆದ ಏಕೈಕ ಪಕ್ಷವಾಗಿ ಟಿಆರ್ಎಸ್ ಇತಿಹಾಸ ನಿರ್ಮಿಸಿದೆ. ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆದು, ಜಯ ಸಾಧಿಸಿರುವ ಕೆಸಿಆರ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮಧ್ಯಾಹ್ನ 1:30ಕ್ಕೆ ರಾಜಭವನದಲ್ಲಿ ನಡೆಯುವ ಪ್ರಮಾಣವಚನ ಸಮಾರಂಭದಲ್ಲಿ ಕೆಸಿಆರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಜೊತೆ ಮತ್ತಿಬ್ಬರು ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಇನ್ನು 5-6 ದಿನಗಳಲ್ಲಿಯೇ ಸಂಪುಟ ವಿಸ್ತರಣೆ ಸಹ ನಡೆಯಲಿದೆ ಎಂದು ತಿಳಿದುಬಂದಿದೆ.

ಟಿಆರ್ಎಸ್ ಕೇಂದ್ರ ಕಚೇರಿಯಾದ ತೆಲಂಗಾಣ ಭವನದಲ್ಲಿ ನಿನ್ನೆ ಅವರು ಶಾಸಕಾಂಗದ ಪಕ್ಷದ ನಾಯಕರಾಗಿ ಅಧಿಕೃತವಾಗಿ ಹೊರಹೊಮ್ಮಿದರು.

ಪ್ರಮಾಣವಚನ ಸಮಾರಂಭದ ನಿಮಿತ್ತ ರಾಜಭವನದ ರಸ್ತೆಯಲ್ಲಿ ಮಧ್ಯಾಹ್ನ 12ರಿಂದ 3ಗಂಟೆವರೆಗೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಈಗಾಗಲೇ ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಚುನಾವಣಾ ಆಯೋಗವು ಇಂದೇ ಗೆಜೆಟ್ ಅಧಿಸೂಚನೆಯನ್ನೂ ನೀಡಲಿದೆ.

ನಿನ್ನೆ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರನ್ನು ಭೇಟಿಯಾಗಿದ್ದ ಕೆಸಿಆರ್ ಹಾಗೂ ಅವರ ಹಳೆಯ ಸಚಿವ ಸಂಪುಟ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ವೇಳೆ ಗುರುವಾರ ಹೊಸ ಸರ್ಕಾರ ರಚನೆಯಾಗುವವರೆಗೆ ಕೆಸಿಆರ್ ಅವರೇ ಮುಖ್ಯಮಂತ್ರಿಯಾಗಿ ಮಂದುವರೆಯುವಂತೆ ರಾಜ್ಯಪಾಲರು ತಿಳಿಸಿದ್ದರು. ಆಗ ಹೊಸ ಸರ್ಕಾರ ರಚನೆಗೆ ಕೆಸಿಆರ್ ಹಕ್ಕು ಮಂಡಿಸಿದರು ಎಂದೂ ತಿಳಿದುಬಂದಿದೆ.