- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಂದಿರಾಗಾಂಧಿ ಆಪ್ತನಿಗೆ ಮಧ್ಯಪ್ರದೇಶದ ಗದ್ದುಗೆ: ಸಿಎಂ ಗಾದಿಗೇರಲಿರುವ ಕಮಲನಾಥ್

rahul-gandhi [1]ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಲು ಕಾರಣರಾದ ಕಮಲನಾಥ್ ಸಿಎಂ ಆಗಿ ಡಿಸೆಂಬರ್ 17ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ವ್ಯಾಪಕ ಚರ್ಚೆಯ ನಂತರ ಕಮಲನಾಥ್ರನ್ನೇ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ನಿನ್ನೆ ಅಧೀಕೃತವಾಗಿ ಘೋಷಿಸಿತ್ತು. ಡಿ. 17ರಂದು ಲಾಲ್ ಪರೇಡ್ ಗ್ರೌಂಡ್ನಲ್ಲಿ ನಡೆಯುವ ಸಮಾರಂಭದಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ . ಒಂಭತ್ತು ಬಾರಿ ಸಂಸದರಾಗಿ ಆಯ್ಕೆಯಾಗಿರುವ 72 ವರ್ಷದ ಕಮಲನಾಥ್, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಸ್ಥಿತ್ವ ತೋರಿಸಲು ಸಾಕಷ್ಟು ಶ್ರಮಿಸಿದ್ದಾರೆ.

ಕಮಲನಾಥ್ ಗಾಂಧಿ ಕುಟುಂಬಕ್ಕೆ ಪರಮಾಪ್ತರು. ಕಾಂಗ್ರೆಸ್ ವಲಯದಲ್ಲಿ ಇವರನ್ನು ಇಂದಿರಾಗಾಂಧಿ ಅವರ ಮೂರನೇ ಮಗ ಎಂದೇ ಕರೆಯಲಾಗುತ್ತದೆ. ಈ ಬಗ್ಗೆ ಸ್ವತಃ ಇಂದಿರಾ ಅವರೇ ಹೇಳಿಕೊಂಡಿದ್ದರು. ರಾಜಕೀಯವಾಗಿ ಇಂದಿರಾಗೆ ಇವರು ಸಾಕಷ್ಟು ಸಹಾಯ ಮಾಡಿದ್ದರು.

ಕಾನ್ಪುರದಲ್ಲಿ 1946ರಲ್ಲಿ ಜನಿಸಿದ ಕಮಲನಾಥ್ ಉದ್ಯಮಿ ಕುಟುಂಬದವರು. ಡೂನ್ ಶಾಲೆಯಲ್ಲಿ ಶಿಕ್ಷಣ ಪೂರೈಸಿದರು. ನಂತರ ಗಾಂಧಿ ಕುಟುಂಬದ ಸಂಪರ್ಕಕ್ಕೆ ಬಂದು, 1980ರಲ್ಲಿ ಮೊದಲು ಲೋಕಸಭೆಗೆ ಆಯ್ಕೆಯಾದರು. ಇವರನ್ನೂ ಒಳಗೊಂಡು 7 ಜನರ ಯುವ ಸಂಸದರ ಗುಂಪನ್ನು ಸಂಜಯ್ ಗಾಂಧಿ ಹುಡುಗರು ಎಂದೇ ಕರೆಯಲಾಗುತ್ತಿತ್ತು. ಅಲ್ಲದೆ, ಇಂದಿರಾ ಬಗ್ಗೆ ಇವರ ಸ್ವಾಮಿನಿಷ್ಠೆ ಎಷ್ಟರಮಟ್ಟಿಗಿತ್ತು ಎಂದರೆ, ಅವರು ಜೈಲು ಸೇರಿದಾಗ ಕಮಲನಾಥ್ ಸಹ ಜೈಲಿಗೆ ತೆರಳಿದರು. ಅಲ್ಲದೆ, ಸಂಜಯ್ ಜೈಲಿಗೆ ತೆರಳುವಾಗ ಕಾಂಗ್ರೆಸ್ ಜವಾಬ್ದಾರಿಯನ್ನು ಕಮಲ್ಗೆ ವಹಿಸಿದ್ದರು.

2008ರಲ್ಲಿ ಎಕನಾಮಿಕ್ಸ್ ಟೈಮ್ಸ್ನಿಂದ ಇವರಿಗೆ ವರ್ಷದ ಉದ್ಯಮ ಸುಧಾರಕ ಎಂಬ ಬಿರುದು ನೀಡಲಾಗಿತ್ತು. ಈ ಚುನಾವಣೆಯಲ್ಲಿ ರಣತಂತ್ರ ರೂಪಿಸಿದ್ದ ಕಮಲನಾಥ್ ಹಿಂದುತ್ವ ಧೋರಣೆಯನ್ನು ಮುಂದೊಡ್ಡಿ ಮತಬೇಟೆಯಾಡಿದರು. ತಾವು ಅಧಿಕಾರಕ್ಕೆ ಬಂದರೆ 23 ಸಾವಿರ ಗ್ರಾ.ಪಂ.ಗಳಲ್ಲಿ ಗೋಶಾಲೆಗಳನ್ನು ತೆರೆಯುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಚಿಂದ್ವಾರದಲ್ಲಿ ದೇಶದ ಅತಿ ಎತ್ತರದ ಹನುಮನ ಮೂರ್ತಿಯನ್ನು ಇವರು ನಿರ್ಮಿಸಿದ್ದಾರೆ. ರಾಜಕೀಯ ರಂಗದಲ್ಲಿ ಹಲವು ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಇವರು, ಮಹತ್ವದ ಸುಧಾರಣೆಗಳನ್ನು ತಂದು ಜನಪ್ರಿಯರಾಗಿದ್ದಾರೆ. 1992ರಲ್ಲಿ ರಿಯೋ ಡಿ ಜನೈರೋದ ಅರ್ತ್ ಸಮ್ಮಿತ್ನಲ್ಲಿ ರೈತರ ಹಕ್ಕುಗಳ ಬಗ್ಗೆ ಮಾತನಾಡಿ, ಜಗತ್ತಿನ ಗಮನ ಸೆಳೆದಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಕಮಲನಾಥ್, ಬಿಜೆಪಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಲುವಿನ ಸಂಭ್ರಮದಲ್ಲಿರುವ ಅವರು ಇನ್ನೇನು ಸಿಎಂ ಆಗಿ ಅಧಿಕಾರಿ ವಹಿಸುವ ಉತ್ಸುಕತೆಯಲ್ಲಿದ್ದಾರೆ .