- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಾಟ್ಯಗುರು ವಿದ್ವಾನ್ ಕುದ್ಕಾಡಿ ವಿಶ್ವನಾಥ್ ರೈ ಇನ್ನಿಲ್ಲ…!

vishwanath [1]ಪುತ್ತೂರು: ಹಿರಿಯ ನಾಟ್ಯಗುರು ವಿದ್ವಾಂಸ ಕಲಾಶ್ರೀ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ (86) ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುಳ್ಯಪದವಿನಲ್ಲಿ‌ ಬಸ್ ಇಳಿದು ನಡೆದು ಹೋಗುತ್ತಿರುವಾಗ ಕುಸಿದು ಬಿದ್ದ ಅವರನ್ನು‌ ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಅವರು ಮೃತಪಟ್ಟಿದ್ದಾರೆ.

ವಿಶ್ವ ಕಲಾನಿಕೇತನ ಎಂಬ ಹೆಸರಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯದ ಪಟ್ಟುಗಳನ್ನು ಕಲಿಸಿಕೊಟ್ಟ ಕಲಾಶ್ರೀ ಬಿರುದಾಂಕಿತ ವಿದ್ವಾನ್ ಕುದ್ಕಾಡಿ ಭರತನಾಟ್ಯ ಕ್ಷೇತ್ರದಲ್ಲಿ ಮೇರು ಪ್ರತಿಭೆಯಾಗಿದ್ದರು.

ಭಾನುವಾರ ಪುತ್ತೂರಿನಲ್ಲಿ ನಡೆದ ಪುಸ್ತಕ ಹಬ್ಬದಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಭಾಷಣವನ್ನೂ ಮಾಡಿದ್ದರು. ಆದರೆ, ಸಂಜೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

1932ರಲ್ಲಿ ಜನಿಸಿದ್ದ ಶ್ರೀ ಕುದ್ಕಾಡಿ ವಿಶ್ವನಾಥ ರೈ ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿದ ಕಲಾವಿದರು. ವಿದ್ವಾನ್ ಎ. ಎನ್. ನಾಗರಾಜನ್, ಶ್ರೀ ರಾಜನ್ ಅಯ್ಯರ್, ಕೆ.ಎಸ್. ರಾಜಗೋಪಾಲ್, ಕಾಂಚೀಪುರಂ ಜಿ. ಎಳ್ಳಪ್ಪನ್, ಡಾ. ಕೆ. ವೆಂಕಟಲಕ್ಷ್ಮಮ್ಮ ಮುಂತಾದವರಿಂದ ಭರತನಾಟ್ಯ, ಕಥಕ್ಕಳಿ, ಓರಿಯಂಟಲ್ ನೃತ್ಯ ಅಭ್ಯಾಸ ಮಾಡಿದ್ದ ಅವರಿಗೆ ಮೃದಂಗ ಹಾಗೂ ಹಾಡುಗಾರಿಕೆಯಲ್ಲೂ ಪರಿಣತಿ ಇತ್ತು. ಜೊತೆಗೆ ಇಂಡೋ-ಸಿಲೋನ್ ಸಾಂಸ್ಕೃತಿಕ ವಿನಿಮಯ ಯೋಜನೆಯಲ್ಲಿ 2 ವರ್ಷಗಳ ಕಾಲ ಸಿಂಹಳಿ ನೃತ್ಯ ಅಭ್ಯಾಸ ಮಾಡಿದ್ದರು.

ಲಂಕಾ ದರ್ಶನ, ದೇವಿ ಅಬ್ಬಕ್ಕ ರಾಣಿ, ಅಬ್ಬಕ್ಕಬ್ಬೆ ಅಬ್ಬಕ್ಕಬ್ಬೆ ಮುಂತಾದ 24 ಕೃತಿಗಳನ್ನು ರಚಿಸಿದ ಇವರು ಹಲವು ನೃತ್ಯ ನಾಟಕಗಳನ್ನು ನಿರ್ದೇಶಿಸಿದ್ದಾರೆ. ವಿಶ್ವನಾಥ್ ರೈ ಅವರ ವಿಶ್ವಕಲಾ ನಿಕೇತನದಲ್ಲಿ ನೂರಾರು ಯುವ ಕಲಾವಿದರು ಶಿಕ್ಷಣ ಪಡೆಯುತ್ತಿದ್ದಾರೆ. ಪುಸ್ತಕ ಪ್ರಕಟಣೆ, ನಟನೆ ಇವರ ಇತರ ಹವ್ಯಾಸಗಳು. ಇವರ “ನರ್ತನ ಜಗತ್‌” ನೃತ್ಯ ಕಲಾವಿದರಿಗೆ ಬಹಳ ಉಪಯುಕ್ತ ಕೃತಿಯಾಗಿದೆ.

‘ಲಲಿತಕಲಾ ಪ್ರವೀಣ’, ‘ನರ್ತನ ಕಲಾ ಚತುರ’ ಮುಂತಾದ ಬಿರುದುಗಳಿಂದ ಸನ್ಮಾನಿತರಾಗಿರುವ ಅವರ ಕೆಲವು ಕೃತಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯ ಬಹುಮಾನಗಳು ಲಭಿಸಿವೆ. ವಿಶ್ವನಾಥ ರೈ ಅವರಿಗೆ 2000-01ನೇ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಅರಸಿ ಬಂದಿತ್ತು.

ಮೃತರು ಹಿರಿಯ ಕಲಾವಿದೆ ಹಾಗೂ ಪತ್ನಿ ವಿದುಷಿ ನಯನಾ ವಿ. ರೈ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರು ಮತ್ತು ಶಿಷ್ಯವೃಂದವನ್ನು ಅಗಲಿದ್ದಾರೆ.