ರೈತರ ಸಮಸ್ಯೆಗಳಿಗೆ ಪಕ್ಷಾತೀತವಾಗಿ ಸ್ಪಂದನೆ: ಡಾ. ಜಯಮಾಲಾ

10:32 AM, Monday, December 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

jayamalaಉಡುಪಿ: ರೈತರು ದೇಶದ ಬೆನ್ನುಲುಬು, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಕ್ಷಾತೀತವಾಗಿ ಪರಿಹರಿಸಲು ಎಲ್ಲಾ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ತಿಳಿಸಿದ್ದಾರೆ.

ಅವರು ಭಾನುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಹಾಗೂ ಕೃಷಿ ಸಂಬಂದಿತ ಇಲಾಖೆಗಳು ಹಾಗೂ ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ರೈತರ ದಿನಾಚರಣೆ ಮತ್ತು ರೈತ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.

ಜಾಗತೀಕರಣದ ನಂತರ ರೈತರ ಸಮಸ್ಯೆಗಳು ಬೃಹದಾಕಾರವಾಗಿವೆ, ರೈತರ ಸಮಸ್ಯೆಗಳನ್ನು ಪಕ್ಷಾತೀತವಾಗಿ ಕಂಡು ಅವುಗಳನ್ನು ಹಂತಹಂತವಾಗಿ ಬಗೆಹರಿಸಲು ಆದ್ಯತೆಯ ಮೇಲೆ ಪ್ರಯತ್ನಿಸಬೇಕು, ರೈತರ ಅಭಿವೃದ್ದಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇವುಗಳನ್ನು ರೈತ ಸಂಘಟನೆಗಳ ಮುಖಂಡರು ಪ್ರತಿ ರೈತರಿಗೆ ತಲುಪಿಸಬೇಕು,ರೈತರ ಪರ ಹೆಚ್ಚು ಯೋಜನೆಗಳು ಜಾರಿಗೆ ಬರಬೇಕು, ಪ್ರಕೃತಿಯ ನಿಜವಾದ ರಕ್ಷಕರು ರೈತರು, ರೈತರು ನೀಡುವ ಸೇವೆಗೆ ಯಾವುದೇ ಬೆಲೆ ಕಟ್ಟಲು ಸಾದ್ಯವಿಲ್ಲ ಎಂದು ಡಾ. ಜಯಮಾಲಾ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಹಿಂದುಳಿದಿದೆ, ಇದು ಲಭದಾಯಕವಲ್ಲ ಎಂಬ ಭಾವನೆ ರೈತರಲ್ಲಿದೆ, ಜಿಲ್ಲೆಯ ರೈತರು ಎದುರಿಸುತ್ತಿರುವ ಕಾಡುಪ್ರಾಣಿ ಹಾವಳಿ , ವಾರಾಹಿ ನೀರಿನ ಯೋಜನೆ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಬೇಕಿದೆ , ಕೃಷಿ ಮತ್ತು ರೈತಪರ ಯೋಜನೆಗಳನ್ನು ಜಿಲ್ಲೆಗೆ ರೂಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 2016-17 ನೇ ಸಾಲಿನ ರಾಜ್ಯಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಪಡೆದ ಶಂಭು ಶಂಕರ ರಾವ್, 2017-18 ರ ಆತ್ಮ ಯೋಜನೆಯಡಿ ರಾಜ್ಯಮಟ್ಟದ ಉದಯೋನ್ಮುಖ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಶಬರೀಶ್ ಸುವರ್ಣ, ರಾಜೇಶ್ ಪೂಜಾರಿ, ಉಡುಪಿ ಜಿಲ್ಲಾ ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ವಿಜೇತರಾದ ಕೃಷಿಕರು, ಆತ್ಮ ಯೋಜನೆಯಡಿ ಶ್ರೇಷ್ಠ ಆಸಕ್ತು ಗುಂಪು ಪ್ರಶಸ್ತಿ , ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಉಡುಪಿ , ಕುಂದಾಪುರ , ಕಾರ್ಕಳ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು,ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ತೋನ್ಸೆ, ಉದಯ ಕೋಟ್ಯಾನ್ ಮೈರ್ಮಾಡಿ ಸುಧಾಕರ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕರಿ ಸಿಂದು ಬಿ ರೂಪೇಶ್, ಕುಂದಾಪುರ ಉಪ ವಿಭಾಗಾಧಿಕಾರಿ ಭೂ ಬಾಲನ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ವನ್ಯಜೀವಿ ವಿಭಾಗದ ಗಣೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಸ್ವಾಗತಿಸಿದರು, ಉಪ ನಿರ್ದೇಶಕ ಚಂದ್ರಶೇಖರ್ ನಾಯ್ಕ್ ವಂದಿಸಿದರು, ಸಹಾಯಕ ನಿರ್ದೇಶಕ ಮೋಹನ್ ರಾಜ್ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English