- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕ್ಯಾಂಪ್ಕೋ ಚಾಕಲೇಟ್‌ಗಳು ಮಧ್ಯಪ್ರದೇಶದ ಮಾರುಕಟ್ಟೆಗೆ ಪ್ರವೇಶ

campco chocolate [1]

ಮಂಗಳೂರು : ಮಧ್ಯ ಪ್ರದೇಶದ ಹಾಲು ಉತ್ಪಾದಕರ ಒಕ್ಕೂಟ ಸಾಂಚಿ ಸಂಸ್ಥೆ ಹಾಗೂ ಕರ್ನಾಟಕದ ಕ್ಯಾಂಪ್ಕೋ ಸಂಸ್ಥೆ ಕ್ಯಾಂಪ್ಕೋ ಸಂಸ್ಥೆಯ ಚಾಕಲೇಟು ಉತ್ಪನ್ನಗಳನ್ನು ಮಧ್ಯಪ್ರದೇಶದಲ್ಲಿ ಮಾರಾಟ ಮಾಡುವ ಕುರಿತು ಒಪ್ಪಂದ ಮಾಡಿಕೊಂಡಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಒಪ್ಪಂದದ ಅಂತಿಮ ಪ್ರಕ್ರಿಯೆಯ ಬಳಿಕ ಚಾಕಲೇಟ್‌ ಬಿಡುಗಡೆ ನಡೆಯಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೋಂಕೋಡಿ ಪದ್ಮನಾಭ ಅವರು ಸೋಮವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ಜೂನ್‌ ತಿಂಗಳಿನಿಂದ ಮಧ್ಯಪ್ರದೇಶದ ಎಲ್ಲಾ ಹಾಲಿನ ಬೂತ್‌ಗಳಲ್ಲಿ ಕ್ಯಾಂಪ್ಕೋ ಚಾಕಲೇಟ್‌ಗಳು ಲಭ್ಯವಾಗಲಿವೆ ಎಂದು ಅವರು ತಿಳಿಸಿದರು.

ಕೇರಳ ಮಿಲ್ಮಾ ಮತ್ತು ಕರ್ನಾಟಕದ ನಂದಿನಿ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಬಿಹಾರದ ಸುಧಾ ಜತೆ ಒಪ್ಪಂದಕ್ಕೆ ಪ್ರಯತ್ನ ನಡೆಯುತ್ತಿದೆ ಎಂದು ವಿವರಿಸಿದರು.

2011- 12 ರ ಸಾಲಿನಲ್ಲಿ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ 16,000 ಮೆ. ಟನ್‌ ಚಾಕಲೇಟು ಉತ್ಪಾದನೆ ಮತ್ತು 160 ಕೋಟಿ ರೂ. ಮೌಲ್ಯದ ಮಾರಾಟ ನಡೆದಿದೆ. ನೇಪಾಳಕ್ಕೆ 500 ಲಕ್ಷ ರೂ. ಗಳ ಚಾಕಲೇಟು ರಫ್ತು ಮತ್ತು ಆಫ್ರಿಕಾ ಖಂಡದ ದೇಶಗಳಿಗೆ 360 ಲಕ್ಷ ರೂ.ಗಳ ಇಂಡಸ್ಟ್ರಿಯಲ್‌ ಚಾಕಲೇಟು ರಫ್ತು ನಡೆಯಲಿದೆ. ಬಾಂಗ್ಲಾ, ಭೂತಾನ್‌, ಸಿಂಹಳ, ಪಾಕಿಸ್ಥಾನಕ್ಕೆ ಚಾಕಲೇಟು ರಫ್ತು ಮಾಡುವ ಪ್ರಯತ್ನ ಕೂಡ ಪ್ರಗತಿಯಲ್ಲಿದೆ. ಹಿಮಾಲಯ ಡ್ರಗ್ಸ್‌ ಕಂಪೆನಿಯ ಉತ್ಪನ್ನಗಳು ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಉತ್ಪಾದನೆಯಾಗಲಿದೆ. ಸುಮಾರು 21 ಸಾವಿರ ಕೋಟಿ ರೂ. ಬಂಡವಾಳ ವಿನಿಯೋಗಿಸಿ ಚಾಕಲೇಟು ಕಾರ್ಖಾನೆಯ ವಿಸ್ತರಣೆ ಯೋಜನೆ ಕೈಗೊಳ್ಳಲಾಗಿದೆ. ಹೂವಿನಹಡಗಲಿ ಮತ್ತು ಚಿಕ್ಕೋಡಿಗಳಲ್ಲಿ ಪವಮಾನ ಯಂತ್ರ ಸ್ಥಾಪಿಸುವ ಮೂಲಕ ಪ್ರಾಕೃತಿಕ ವಿದ್ಯುತ್ಛಕ್ತಿಗೆ ಪ್ರೋತ್ಸಾಹದ ಜೊತೆಗೆ ಇಡೀ ಕಾರ್ಖಾನೆಗೆ ಬೇಕಾದ ಇಂದನ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ಗುಣಮಟ್ಟದಲ್ಲಿ ಐಎಸ್‌ಓ 22000, ಐಎಸ್‌ಓ 14000 ಮತ್ತು ಓಎಚ್‌ಎಸ್‌ಎಸ್‌ 18000 ಅಂತಾರಾಷ್ಟ್ರೀಯ ಪ್ರಮಾಣಪತ್ರ ಪಡೆದಿದೆ ಎಂದು ತಿಳಿಸಿದರು.

ಸಾಂಚಿ ಅಧ್ಯಕ್ಷ ಸುಭಾಷ್‌ ಮಾಂಡೆ, ಕ್ಯಾಂಪ್ಕೋ ಉಪಾಧ್ಯಕ್ಷ ಕೆ. ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಎಂ. ಸುರೇಶ್‌ ಭಂಡಾರಿ, ನಿರ್ದೇಶಕ ಕೆ. ಕರುಣಾಕರನ್‌ ನಂಬಿಯಾರ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.