- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದಲ್ಲಿ 156 ತಾಲೂಕುಗಳಲ್ಲಿ ಬರಗಾಲ ಎದುರಾಗಿರುವ ಹಿನ್ನೆಲೆ: ಮೋದಿ ಭೇಟಿಯಾಗಲಿರುವ ಸಿಎಂ

narendra-modi [1]ಬೆಂಗಳೂರು: ರಾಜ್ಯದಲ್ಲಿ 156 ತಾಲೂಕುಗಳಲ್ಲಿ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ಇಂದು ಸಂಜೆ 5 ಗಂಟೆಗೆ ಪ್ರಧಾನಿ ಗೃಹಕಚೇರಿಯಲ್ಲಿ ಭೇಟಿಯಾಗಲು ಸಮಯ ನಿಗದಿಯಾಗಿದೆ. ರಾಜ್ಯದ ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಇಡೀ ರಾಜ್ಯ ಬರಗಾಲಕ್ಕೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಪ್ರಧಾನಿಯೊಂದಿಗೆ ಸಿಎಂ ಕುಮಾರಸ್ವಾಮಿ ಅವರು ಚರ್ಚೆ ನಡೆಸಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಹಲವು ತಾಲೂಕುಗಳು ನಿರಂತರ ಬರಗಾಲದಿಂದ ತತ್ತರಿಸಿದೆ. ಹೀಗಾಗಿ ತಕ್ಷಣವೇ ರಾಜ್ಯದ ನೆರವಿಗೆ ಪರಿಹಾರ ನೀಡುವಂತೆ ಪ್ರಧಾನಿ ಬಳಿ ಕುಮಾರಸ್ವಾಮಿ ಅವರು ಮನವಿ ಮಾಡಲಿದ್ದಾರೆ.

ಇದಕ್ಕೂ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೆಟ್ಲಿ ಅವರನ್ನು ಭೇಟಿ ಮಾಡಲಿದ್ದಾರೆ. ಅದೇ ರೀತಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಕೋರಿ ಮನವಿ ಸಲ್ಲಿಸಲಿದ್ದಾರೆ. ನಂತರ ಕೇಂದ್ರ ರೈಲ್ವೆ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿಯಾಗಿ ರಾಜ್ಯದ ಕಲ್ಲಿದ್ದಲು ಬಗ್ಗೆ ಚರ್ಚೆ ನಡೆಸಲಿದ್ದಾರೆ.