- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಾನಸಿಕ ಮಾಲಿನ್ಯ ದೂರವಾದಾಗ ವಿಶ್ವಶಾಂತಿ, ಲೋಕಕಲ್ಯಾಣ : ಭಟ್ಟಾರಕ ಸ್ವಾಮೀಜಿ

Abhisheka [1]ಧರ್ಮಸ್ಥಳ : ಬಾಹುಬಲಿ ತನ್ನ ಜೀವನದಲ್ಲಿ ಸಾಧಿಸಿ ತೋರಿಸಿದ ಅಹಿಂಸೆ, ತ್ಯಾಗ, ವೈರಾಗ್ಯ ಮೊದಲಾದ ಮೌಲ್ಯಗಳಿಂದ ಶಾಂತಿ, ಸಾಮರಸ್ಯ ಸಾಧ್ಯವಾಗುತ್ತದೆ. ಮಾನಸಿಕ ಮಾಲಿನ್ಯ, ವಿಕಾರಗಳು ದೂರವಾದಾಗ ವಿಶ್ವಶಾಂತಿಯೊಂದಿಗೆ ಲೋಕ ಕಲ್ಯಾಣವಾಗುತ್ತದೆ ಎಂದು ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಶನಿವಾರ ಮೈಸೂರು ಮತ್ತು ಚಾಮರಾಜನಗರ ಜೈನ ಸಮಾಜದ ವತಿಯಿಂದ ನಡೆದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಅವರು ಮಾತನಾಡಿದರು.

Abhisheka [2]ತ್ಯಾಗದ ಸಂಕೇತವಾಗಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ದೇವರು, ಗುರುಗಳು, ಶಾಸ್ತ್ರದ ಸಾಕ್ಷಿಯಾಗಿ ಎಲ್ಲರ ಅನುಗ್ರಹಕ್ಕಾಗಿ ಭಕ್ತಿಯ ಸೇವೆ ಮಾಡಲಾಗುತ್ತದೆ. ನಿತ್ಯ ಜೀವನದಲ್ಲಿ ಪಂಚಾಣುವ್ರತಗಳ ಪಾಲನೆ ಮಾಡಬೇಕು. ತನ್ನ ಆತ್ಮನನ್ನು ನೋಡಿ ಸಂತೋಷ ಪಡುವುದು ಅಂದರೆ ಆತ್ಮಾವಲೋಕನವೇ ಸಮ್ಯಕ್ ದರ್ಶನವಾಗಿದೆ. ಇದರಿಂದ ಆತ್ಮ ಶುದ್ಧಿಯಾಗಿ ಆತ್ಮಶಕ್ತಿ ಜಾಗೃತವಾಗುತ್ತದೆ. ಆತ್ಮಾನಂದದಿಂದ ಸಂಸಾರದ ಎಲ್ಲಾ ಕಷ್ಟಗಳನ್ನು ಮರೆಯುತ್ತೇವೆ.

ಧರ್ಮಸ್ಥಳವು ಧರ್ಮದ ನೆಲೆವೀಡಾಗಿದ್ದು ಇಲ್ಲಿ ಮನ, ವಚನ, ಕಾಯದಿಂದ ಧರ್ಮ ಸದಾ ಜಾಗೃತವಾಗಿರುತ್ತದೆ. ಧರ್ಮದ ಅನುಷ್ಠಾನವಾಗುತ್ತಿದೆ. ಸ್ವ-ಪರ ಹಿತಕ್ಕಾಗಿ ಶ್ರಮಿಸುವವರೆ ಸತ್ಪುರುಷರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ರತ್ನತ್ರಯ ಧರ್ಮ ಪಾಲನೆಯೊಂದಿಗೆ ಲೋಕಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಿದ್ದಾರೆ. ಅವರು ಇಡಿ ದೇಶಕ್ಕೆ ಆದರ್ಶ ನಾಯಕ ಹಾಗೂ ಮಾರ್ಗದರ್ಶಕರು ಎಂದು ಸ್ವಾಮೀಜಿ ಹೇಳಿದರು. ಮಸ್ತಕಾಭಿಷೇಕ ನೋಡುವುದೂ, ಮಾಡುವುದೂ ಪುಣ್ಯದ ಕೆಲಸವಾಗಿದೆ ಎಂದು ಅವರು ಹೇಳಿದರು.

ನೀರು, ಹಾಲು, ಎಳನೀರು, ಅರಿಶಿನ, ಕೇಸರಿ, ಕಷಾಯ, ಕಬ್ಬಿನ ರಸ, ಕಲ್ಕಚೂರ್ಣ, ಶ್ರೀಗಂಧ, ಚಂದನ ಅಷ್ಟಗಂಧ ಮೊದಲಾದ ಮಂಗಲ ದ್ರವ್ಯಗಳಿಂದ ಬಾಹುಬಲಿ ಸ್ವಾಮಿಗೆ ೧೦೦೮ ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು.

ಪೂರ್ಣ ಕುಂಭಾಭಿಷೇಕ, ಮಹಾ ಮಂಗಳಾರತಿ, ಶಾಂತಿ ಮಂತ್ರ ಪಠಣದೊಂದಿಗೆ ಮಸ್ತಕಾಭಿಷೇಕ ಸಮಾಪನಗೊಂಡಿತು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕನಕಗಿರಿ ಭುವನಕೀರ್ತಿ ಸ್ವಾಮೀಜಿಯವರನ್ನು ಗೌರವಿಸಿದರು.
ಪೂಜ್ಯ ಮುನಿಗಳಾದ ಆದಿತ್ಯ ಸಾಗರ್ ಮುನಿ ಮಹಾರಾಜ್ ಮತ್ತು ಸಹಜ ಸಾಗರ್ ಮುನಿ ರಾಜರು ಉಪಸ್ಥಿತರಿದ್ದರು.
ಸೋಂದಾ ಮಠದ ಭಟ್ಟಾಕಲಂಕ ಸ್ವಾಮೀಜಿ ಮತ್ತು ತಮಿಳುನಾಡು ಅರಿಹಂತಗಿರಿಯ ಧವಳಕೀರ್ತಿ ಭಟ್ಟಾರಕರು ಉಪಸ್ಥಿತರಿದ್ದರು.

ಹೇಮಾವತಿ ವಿ, ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಇದ್ದರು.

ಮಹಾಮಸ್ತಕಾಭಿಷೇಕ: ತಮಿಳುನಾಡು ಜೈನ ಸಮಾಜದ ವತಿಯಿಂದ ಅರಿಹಂತಗಿರಿ ಧವಳಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ಭಾನುವಾರ ಬಾಹುಬಲಿ ಸ್ವಾಮಿಗೆ ೧೦೦೮ ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯುತ್ತದೆ.