- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಾಟ್ಸ್ಆ್ಯಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ ಮೇಲೆ ಚುನಾವಣಾ ಆಯೋಗ ಕಣ್ಣು

DC-shenthil [1]ಮಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಧ್ಯಮಗಳಲ್ಲಿ ಅಭ್ಯರ್ಥಿ ಪರ ಪೇಯ್ಡ್ ನ್ಯೂಸ್ ಸೇರಿದಂತೆ ಪ್ರಚಾರದ ಮೇಲೆ ಈಗಾಗಲೇ ನಿಗಾ ಇರಿಸುತ್ತಿದ್ದ ಚುನಾವಣಾ ಆಯೋಗ ಇದೀಗ ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಡುವ ಸೂಚನೆ ನೀಡಿದೆ.

ವಾಟ್ಸ್ಆ್ಯಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ಶೇರ್‌ಚಾಟ್ ಮೊದಲಾದವುಗಳಲ್ಲಿ ಆನ್‌ಲೈನ್‌ನಲ್ಲಿ ತಮ್ಮ ಕೈಯ್ಯಲ್ಲಿರುವ ಸ್ಮಾರ್ಟ್ ಫೋನ್‌ಗಳ ಮೂಲಕ ಕ್ಷಿಪ್ರಗತಿಯಲ್ಲಿ ಸಂದೇಶಗಳನ್ನು ಹಂಚಿಕೊಳ್ಳಬಹುದು. ಈಗ ಇವುಗಳ ಮೂಲಕ ಮಾಡುವ ಪ್ರಚಾರವೂ ಮಾಧ್ಯಮ (ದೃಶ್ಯ ಮತ್ತು ಪತ್ರಿಕೆ, ವೆಬ್‌ಸೈಟ್) ಗಳಲ್ಲಿ ಪ್ರಸಾರವಾಗುವ ಪ್ರಚಾರ ಜಾಹೀರಾತಿನ ವ್ಯಾಪ್ತಿಗೆ ಒಳಪಡುವುದಾಗಿ ಆಯೋಗ ಸ್ಪಷ್ಟಪಡಿಸಿದೆ.

ಇನ್ನು ಮುಂದೆ ಅಭ್ಯರ್ಥಿಯ ಪರ ತಮ್ಮ ಸ್ಮಾರ್ಟ್ ಫೋನ್‌ಗಳ ಮೂಲಕ ಬಲ್ಕ್ ಸಂದೇಶ ಅಥವಾ ಧ್ವನಿ ಸಂದೇಶಗಳ ಮೂಲಕವೂ ಪ್ರಚಾರ ಮಾಡುವಂತಿಲ್ಲ. ಒಂದು ವೇಳೆ ಅಂತಹ ಪ್ರಚಾರ ನಡೆದಲ್ಲಿ ಅದನ್ನು ಮೀಡಿಯಾ ಸರ್ಟಿಫಿಕೇಶನ್ ಮತ್ತು ಮಾನಿಟರಿಂಗ್ ಸಮಿತಿ (ಎಂಸಿಎಂಸಿ)ಯು ಜಾಹೀರಾತಾಗಿ ಪರಿಗಣಿಸಿ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಿಕೊಳ್ಳಲಿದೆ. ಒಂದು ವೇಳೆ ಈ ರೀತಿಯಲ್ಲಿ ಜಾಹೀರಾತು ಪ್ರಕಟ ಪಡಿಸಿದವರು ತಮಗೆ ತಿಳಿದಿಲ್ಲ ಅಥವಾ ಆ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಅಭ್ಯರ್ಥಿ ಸ್ಪಷ್ಟಪಡಿಸಿದರೆ, ಅಂತಹ ಸಂದೇಶಗಳನ್ನು ರವಾನಿಸಿದವರೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರವರು ಇಂದು ಚುನಾವಣೆಗೆ ಸಂಬಂಧಿಸಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಹಾಗಾಗಿ ಇನ್ನು ಮುಂದೆ ಮೊಬೈಲ್‌ಗಳಲ್ಲಿ ಯಾವುದೇ ಅಭ್ಯರ್ಥಿ ಪರ ವೈಯಕ್ತಿಕವಾಗಿ ಚುನಾವಣಾ ಪ್ರಚಾರ ನಡೆಸುವವರೂ ಎಚ್ಚರ ವಹಿಸಬೇಕಾಗುತ್ತದೆ. ಇಲ್ಲವೆಂದಾದಲ್ಲಿ ಸಖಾಸುಮ್ಮನೆ ಪ್ರಕರಣಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗಬಹುದು!

ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆಗೆ ಅಡ್ಡಿಯಾಗುವ, ಧಕ್ಕೆ ತರುವ ಯಾವುದೇ ರೀತಿಯ ಸಂದರ್ಭ, ಪ್ರಕರಣಗಳಿಗೆ ಸಂಬಂಧಿಸಿ ನಾಗರಿಕರು ದೂರು ನೀಡಬಹುದು. ಇದಕ್ಕಾಗಿ ಚುನಾವಣಾ ಆಯೋಗ ಸಿ ವಿಜಿಲ್ (cVIGIL ) ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ನಾಗರಿಕರು ತಮ್ಮ ಎದುರು ನಡೆಯುವ ಇಂತಹ ಪ್ರಕರಣಗಳ ಫೋಟೋ ಅಥವಾ ವೀಡಿಯೊವನ್ನು ಈ ಆ್ಯಪ್ ಮೂಲಕ ಕಳುಹಿಸಿ ದೂರು ನೀಡಬಹುದು.

ದೂರು ನೀಡಿದ 100 ನಿಮಿಷಗಳ ಒಳಗೆ ಕ್ರಮ ಕೈಗೊಂಡು ದೂರುದಾರರಿಗೆ ಮಾಹಿತಿ ನೀಡಲಾಗುತ್ತದೆ . ಆದರೆ ನಾಗರಿಕರು ನೀಡುವ ದೂರು ಮಾತ್ರ ನೈಜ ಹಾಗೂ ನಿಖರವಾಗಿರಬೇಕು. ಇಲ್ಲವಾದಲ್ಲಿ, ದೂರು ನೀಡುವವರಿಗೇ ಇದು ಕಾನೂನಿನ ಕುಣಿಕೆಯಾಗಬಹುದು!

ಈ ಬಗ್ಗೆ ಚುನಾವಣಾ ನೀತಿ ಸಂಹಿತೆಗಳ ಮಾರ್ಗಸೂಚಿ ಏನು ಹೇಳುತ್ತೆ ?

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ, ಅಧಿಕಾರದಲ್ಲಿರುವ ಪಕ್ಷದ ಅವಕಾಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಚಿವರ ವೈಯಕ್ತಿಕ ಸಾಧನೆಗಳನ್ನು ಎತ್ತಿ ತೋರಿಸುವ ಅಥವಾ ಮೌಲ್ಯಮಾಪನ ಮಾಡುವಂತಹ ಏಕಪಕ್ಷೀಯ ಪ್ರಚಾರವನ್ನು ಸರಕಾರಿ ಇಲಾಖೆಗಳ ವಿವಿಧ ಅಧಿಕೃತ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾಡುವಂತಿಲ್ಲ.

ಚುನಾವಣಾ ವೆಚ್ಚ ಮೇಲ್ವಿಚಾರಣೆಗಳ ಮೇಲಿನ ಸೂಚನೆಗಳ ಸಂಕಲನದಲ್ಲಿ ಸೂಚಿಸಿರುವಂತೆ, ಟಿವಿ ಚಾನೆಲ್‌ಗಳು/ ಕೇಬಲ್ ನೆಟ್‌ವರ್ಕ್‌ಗಳು, ಖಾಸಗಿ ಎಫ್‌ಎಂ ಚಾನೆಲ್‌ಗಳು ಸೇರಿದಂತೆ ರೇಡಿಯೋ, ಸಿನೆಮಾ ಮಂದಿರಗಳು, ಸಾರ್ವಜನಿಕ ಸ್ಥಳಗಳಲ್ಲಿನ ದೃಶ್ಯ-ಶ್ರಾವ್ಯ ಪ್ರದರ್ಶನಗಳು, ಸಾಮಾಜಿಕ ಜಾಲತಾಣಗಳು ಮತ್ತು ಪ್ರಚಾರದ ಸಂದರ್ಭ ರಾಜಕೀಯ ಕಾರ್ಯಕರ್ತರ ಸಾಮಾನ್ಯ ಚಲನವನಗಳ ಬಗ್ಗೆ ನಿಗಾ ಇರಿಸಲು ಚುನಾವಣೆ/ ಉಪಚುನಾವಣೆಗಳ ಘೋಷಣೆಯಾದ ತಕ್ಷಣದಿಂದ ರಾಜ್ಯ ಮತ್ತು ಜಿಲ್ಲಾ ಮೀಡಿಯಾ ಸರ್ಟಿಫಿಕೇಶನ್ ಮತ್ತು ಮಾನಿಟರಿಂಗ್ ಸಮಿತಿ (ಎಂಸಿಎಂಸಿ)ಯನ್ನು ನೇಮಕಗೊಳಿಸಲಾಗುತ್ತದೆ.

ಚುನಾವಣಾ ಪ್ರಚಾರದ ವೇಳೆ ಬೃಹತ್ ಎಸ್‌ಎಂಎಸ್ (ಬಲ್ಕ್ ಎಸ್‌ಎಂಎಸ್)/ ಧ್ವನಿ ಸಂದೇಶ

ಟಿವಿ ಚಾನೆಲ್‌ಗಳು / ಕೇಬಲ್ ನೆಟ್‌ವರ್ಕ್‌ಗಳು, ಖಾಸಗಿ ಎಫ್‌ಎಂ ಚಾನೆಲ್‌ಗಳು ಸೇರಿದಂತೆ ರೇಡಿಯೋ, ಸಿನೆಮಾ ಮಂದಿರಗಳು, ಸಾರ್ವಜನಿಕ ಸ್ಥಳಗಳಲ್ಲಿನ ದೃಶ್ಯ-ಶ್ರಾವ್ಯ ಪ್ರದರ್ಶನಗಳು, ಸಾಮಾಜಿಕ ಜಾಲತಾಣಗಳಲ್ಲಿನ ಚುನಾವಣಾ ಜಾಹೀರಾತಿಗೆ ಅನ್ವಯವಾಗುವ ಪೂರ್ವ- ಪ್ರಮಾಣೀಕರಣವು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಬೃಹತ್ ಎಸ್‌ಎಂಎಸ್‌ಗಳು/ ಧ್ವನಿ ಸಂದೇಶಗಳಿಗೂ ಅನ್ವಯವಾಗುತ್ತದೆ. ಇಲೆಕ್ಟ್ರಾನಿಕ್ ಮಾಧ್ಯಮಗಳ ಇತರ ವಿಧಾನಗಳಿಗೆ ಅನ್ವಯವಾಗುವ ಕಾನೂನು ನಿಬಂಧನೆಗಳು ಇಂತಹ ಬೃಹತ್ ಎಸ್‌ಎಂಎಸ್‌ಗಳು/ ಧ್ವನಿ ಸಂದೇಶಗಳಿಗೂ ಅನ್ವಯಿಸುತ್ತದೆ.