ಸ್ವಚ್ಛಮೇವ ಜಯತೆ ಎಂಬ ಘೋಷವಾಕ್ಯದಡಿ ಘನ ತ್ಯಾಜ್ಯ ವಿಲೇವಾರಿ

4:15 PM, Wednesday, May 1st, 2019
Share
1 Star2 Stars3 Stars4 Stars5 Stars
(No Ratings Yet)
Loading...

swacha-meva ಮಂಗಳೂರು: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸ್ವಚ್ಛಮೇವ ಜಯತೆ ಎಂಬ ಘೋಷವಾಕ್ಯದಡಿ ಘನ ತ್ಯಾಜ್ಯ ವಿಲೇವಾರಿ ಕಾರ್ಯಕ್ರಮದ ಕುರಿತು ನಿರಂತರ ಅರಿವು ಮೂಡಿಸುವ ಹಿನ್ನಲೆಯಲ್ಲಿ ಆಯ-ವ್ಯಯದಲ್ಲಿ ಘೋಷಣೆಯಾದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜೂನ್ 5 ರಿಂದ 30 ರವರೆಗೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇ, ನಿರ್ವಹಣೆ ಕುರಿತು ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಆರ್ ಸೆಲ್ವಮಣಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮಾರ್ಗದರ್ಶನದಂತೆ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಹಂತದಲ್ಲಿ ವಿವಿಧ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಛತೆಯ ವಾತಾವರಣವನ್ನು ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದರು.

ಮೇ 25 ರೊಳಗೆ ಜಿಲ್ಲಾ ಪಂಚಾಯತ್/ತಾಲೂಕು ಪಂಚಾಯತ್/ಗ್ರಾಮ ಪಂಚಾಯತ್ ಹಂತದಲ್ಲಿ ಶೌಚಾಲಯ ಬಳಕೆ, ಮಕ್ಕಳ ಮಲ ಸೂಕ್ತ ವಿಲೇವಾರಿ ಮತ್ತು ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ ಪ್ರತಿ ಗ್ರಾಮದಲ್ಲಿ 5 ಗೋಡೆ ಬರಹಗಳನ್ನು ಬರೆಸಬೇಕು. ಸ್ವಚ್ಛಮೇವ ಜಯತೆ ಆಂದೋಲನದ ಮಾಹಿತಿಯನ್ನು ಒಳಗೊಂಡ ಪೋಸ್ಟರ್‍ಗಳನ್ನು ಮುದ್ರಣ ಮಾಡಿ ಗ್ರಾಮ ಪಂಚಾಯತಿಗಳಿಗೆ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.

ಸ್ವಚ್ಛತೆ ಕುರಿತು ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮಗಳು ಇಂತಿವೆ: ಜೂನ್ 5 ರಿಂದ ಒಂದು ತಿಂಗಳುಗಳ ಕಾಲ ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 2 ರಿಂದ 3 ಸ್ವಚ್ಛತಾ ರಥಗಳನ್ನು ನಿಯೋಜಿಸಿ ಸ್ವಚ್ಛಮೇವ ಜಯತೆ ಆಂದೋಲನದ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಜೂನ್ 6 ರಂದು ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಹಸಿಕಸ/ಒಣಕಸ ವಿಂಗಡಣೆ ಮತ್ತು ನಿರ್ವಹಣೆ, ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ಜೂನ್ 9 ರಿಂದ 10 ರವರೆಗೆ ಶಾಲಾ ಕಾಲೇಜುಗಳಲ್ಲಿ ಸ್ವಚ್ಛತೆ ಕುರಿತು ಚರ್ಚಾ ಸ್ವರ್ಧೆ, ಪ್ರಬಂಧ ಸ್ಪರ್ಧೆ, 11 ರಿಂದ 14 ರವರೆಗೆ ಗ್ರಾಮೀಣ ಸಮುದಾಯಕ್ಕೆ ಎರಡು ಗುಂಡಿಯ ಉಪಯೋಗ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳ ಆಯೋಜನೆ. 15 ರಿಂದ 21 ರವರೆಗೆ ವಿಶೇಷ ಕಾರ್ಯಾದೇಶ ವಿತರಣಾ ಅಭಿಯಾನ, 21 ರಿಂದ 25 ರವರೆಗೆ ಶೌಚಾಲಯ ಬಳಕೆ ಅಭಿಯಾನ ಮತ್ತು ವಿಶೇಷ ಕೈ ತೊಳೆಯುವ ಅಭಿಯಾನ ನಡೆಯಲಿದೆ.

ಕೈತೊಳೆಯುವ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾದದ್ದು ಎಂದರು.

ಜೂನ್ 27 ರಂದು ಗ್ರಾಮ ಪಂಚಾಯತ್ ಹಂತದಲ್ಲಿ ಸ್ವಚ್ಛಮೇವ ಜಯತೇ ಆಂದೋಲನದ ಪ್ರಯುಕ್ತ ವಿಶೇóóಷ ಗ್ರಾಮ ಸಭೆಯನ್ನು ಆಯೋಜಿಸಿ, ಕುಡಿಯುವ ನೀರು, ನೈರ್ಮಲ್ಯ, ಘನ ತ್ಯಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ ಕುರಿತು ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ಜೂನ್ 30ರಂದು ಅರ್ಥಪೂರ್ಣವಾಗಿ ಸಮಾರೋಪ ಕಾರ್ಯಕ್ರಮ ನಡೆಸಲು ಹಾಗೂ ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡವರಿಗೆ ಪ್ರಶಸ್ತಿ ನೀಡುವ ಯೋಚನೆಯನ್ನು ಸಿಇಒ ಅವರು ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪಕಾರ್ಯದರ್ಶಿ ಮಹೇಶ್ ಪಾಲ್ಗೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English