- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎಂ.ಎಂ.ಕಲಬುರ್ಗಿ ಹತ್ಯೆಗೆ ತರಬೇತಿ ಪಡೆದದ್ದು ಮಂಗಳೂರಿನಲ್ಲಿ

mm-kalburgi [1]ಮಂಗಳೂರು  : ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.

ಕಲಬುರ್ಗಿ ಅವರನ್ನು ಹತ್ಯೆ ಮಾಡಲು ಮಂಗಳೂರಿನಲ್ಲಿ ತರಬೇತಿ ನೀಡಲಾಗಿತ್ತು ಎಂಬ ಮಹತ್ವದ ಮಾಹಿತಿಯೊಂದು ಈಗ ಸಿಕ್ಕಿದೆ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಪ್ರವೀಣ್ ಪ್ರಕಾಶ್ ಚತುರ್ (27) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಎಸ್‌ಐಟಿ ವಶದಲ್ಲಿರುವ ಆರೋಪಿಯಿಂದ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.

ಗೌರಿ ಲಂಕೇಶ್ ಹತ್ಯೆಗೆ ಬೆಳಗಾವಿಯಲ್ಲಿ ಮತ್ತು ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಮಂಗಳೂರಿನಲ್ಲಿ ತರಬೇತಿ ನೀಡಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಇದೊಂದು ಮಹತ್ವದ ಮಾಹಿತಿಯಾಗಿದ್ದು, ಮಂಗಳೂರಿನಲ್ಲಿ ಯಾರು ತರಬೇತಿಗೆ ಸಹಾಯ ಮಾಡಿದ್ದಾರೆ ಎಂದು ಎಸ್ಐಟಿ ತನಿಖೆ ಮಾಡಲಿದೆ.

ಎಸ್‌ಐಟಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಆರೋಪಿಗಳ ಪೈಕಿ 16 ಜನರನ್ನು ಬಂಧಿಸಿದೆ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಪರುಶರಾಮ್ ವಾಘ್ಮೋರೆ ಮತ್ತು ಗಣೇಶ್ ಮಿಸ್ಕಿನ್ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು. ಇವರೇ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಎಸ್‌ಐಟಿ ಶಂಕಿಸಿದೆ. ಗಣೇಶ್ ಬೈಕ್ ಚಾಲನೆ ಮಾಡಿದ್ದ, ವಾಘ್ಮೋರೆ ಗುಂಡು ಹಾರಿಸಿದ್ದ ಎಂಬುದು ಶಂಕೆಯಾಗಿದ್ದು, ತನಿಖೆ ನಡೆಯುತ್ತಿದೆ.

2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಹತ್ಯೆ ಮಾಡುವುದಕ್ಕೆ ಮತ್ತು 2015ರ ಆಗಸ್ಟ್ 30ರಂದು ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡುವುದಕ್ಕೆ ಒಂದೇ ವಿಧವಾದ ಪಿಸ್ತೂಲ್ ಬಳಕೆ ಮಾಡಲಾಗಿದೆ ಎಂದು ಎಸ್‌ಐಟಿ ಪತ್ತೆ ಹಚ್ಚಿತ್ತು.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿರುವ ಎಸ್‌ಐಟಿ 2011 ರಿಂದ 2017ರ ತನಕ 13 ತರಬೇತಿಗಳು ನಡೆದಿತ್ತು ಎಂದು ಉಲ್ಲೇಖಿಸಿದೆ. ಕಲಬುರ್ಗಿ ಅವರ ಹತ್ಯೆಗೆ ಮಂಗಳೂರಿನಲ್ಲಿ ತರಬೇತಿ ನಡೆದಿತ್ತು ಎಂಬ ಮಾಹಿತಿ ಸಿಕ್ಕಿದ್ದು, ಈ ಕುರಿತು ತನಿಖೆಯನ್ನು ಎಸ್‌ಐಟಿ ನಡೆಸಲಿದೆ.

ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಕರ್ನಾಟಕ ಹೈಕೋರ್ಟ್‌ ಧಾರವಾಡ ಸಂಚಾರಿ ಪೀಠ ತನಿಖೆ ಉಸ್ತುವಾರಿಯನ್ನು ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶ ನೀಡಿತ್ತು.