ಚಿಕ್ಕಮಗಳೂರು: ಸಿದ್ಧಾರ್ಥ್ ಕಣ್ಮರೆಯಾಗಿ 36ಗಂಟೆಗಳ ನಂತರ ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಬೋಳಾರ್ ಬಳಿಯ ಹುಯಿಗೆ ಬಜಾರ್‌ನಲ್ಲಿ ತೇಲುತ್ತಿದ್ದುದು ಮೀನುಗಾರಿಕೆಗಾಗಿ ಬುಧವಾರ ಬೆಳಗ್ಗೆ ನದಿ ಇಳಿದಿದ್ದ ರಿತೀಶ್ ಮತ್ತು ತಂಡಕ್ಕೆ ಕಂಡುಬಂದಿದೆ.
59 ವರ್ಷದ ಸಿದ್ಧಾರ್ಥ್ ಅವರ ಸಾವು ಕಾರ್ಪೋರೆಟ್ ವಲಯದಲ್ಲಿ ಆಘಾತ ಮೂಡಿಸಿದೆ. ಅವರು ಪತ್ನಿ ಮಾಳವಿಕಾ, ಪುತ್ರರಾದ ಅಮರ್ಥ್ಯ ಹೆಗ್ಡೆ, ಈಶಾನ್ ಹೆಗ್ಡೆ ಹಾಗೂ ವೃದ್ಧ ತಂದೆ ಗಂಗಯ್ಯ ಹೆಗ್ಡೆ, ತಾಯಿ ವಾಸಂತಿ ಹೆಗ್ಡೆ, ಮಾವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಅತ್ತೆ ಪ್ರೇಮಾ ಕೃಷ್ಣ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಮಂದಿ ಎಬಿಸಿ ಕಾಫಿ ತೋಟಗಳು ಮತ್ತು ಕೆಫೆ ಕಾಫಿ ಡೇ ಸೇರಿದಂತೆ ಆ ಸಮೂಹದ ಉದ್ಯೋಗಿಗಳನ್ನು ಅಗಲಿದ್ಧಾರೆ.
ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ 8.30ರಿಂದ 10.30ರವರೆಗೆ ನಡೆಯಿತು. ಆನಂತರ ಅವರ ಪಾರ್ಥಿವ ಶರೀರವನ್ನು ಅವರೇ ಸ್ಥಾಪಿಸಿದ ಚಿಕ್ಕಮಗಳೂರು ಎಬಿಸಿ ಕಾಫಿ ಕ್ಯೂರಿಂಗ್ ಆವರಣಕ್ಕೆ ತಂದು ಉದ್ಯೋಗಿಗಳು ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು.
ಮೃತದೇಹವನ್ನು ತರುವ ಮುಂಚೆಯೇ ಸಹಸ್ರಾರು ಮಂದಿ ಎಬಿಸಿ ಆವರಣದಲ್ಲಿ ಕಾಯುತ್ತಾ ನಿಂತಿದ್ದರು. ಸಿದ್ಧಾರ್ಥ್ ಅವರ ಮೃತದೇಹ ಎಬಿಸಿ ಆವರಣ ಪ್ರವೇಶಿಸಿದಾಕ್ಷಣ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರ ದುಃಖಾಶ್ರು ತೀವ್ರವಾಯಿತು. ಉದ್ಯೋಗಿಗಳು ತಮ್ಮ ಅನ್ನದಾತನನ್ನು ಕಳೆದುಕೊಂಡ ಶೋಕಕ್ಕಿಂತ ಅತ್ಯಂತ ಆತ್ಮೀಯ ಧಣಿಯನ್ನು ನಾವು ಕಳೆದುಕೊಂಡೆವು ಎಂಬ ದುಃಖದಲ್ಲಿದ್ದುದು ಕಂಡುಬಂತು.
ಎಂದೂ ಸಹ ನಾನು ಧಣಿ-ನೀನು ಉದ್ಯೋಗಿ ಎಂಬ ಅಂತರ ಕಾಯ್ದುಕೊಳ್ಳದೇ ನಗುತ್ತಾ ವಿಶ್ವಾಸಪೂರ್ವಕವಾಗಿ ಉದ್ಯೋಗಿಗಳನ್ನು ನಡೆಸಿಕೊಳ್ಳುತ್ತಿದ್ದ ಹಾಗೂ ತಾವು ಅವರ ಸಹೋದ್ಯೋಗಿ ಎಂಬಂತೆ ವರ್ತಿಸುತ್ತಿದ್ದ ಅತ್ಯಂತ ಮೃದು ಹೃದಯದ ಉದ್ಯಮಿಯನ್ನು ನಾವು ಕಳೆದುಕೊಂಡೆವೆಂಬ ಅನಾಥಭಾವ ಉದ್ಯೋಗಿಗಳಲ್ಲಿ ಮೂಡಿದ್ದು, ಸಿದ್ಧಾರ್ಥ್ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಯಿತು.
ಸಿದ್ಧಾರ್ಥ್ ಸಾವಿನ ಸುದ್ದಿ ತಿಳಿದು ಬಂದಾಕ್ಷಣ ಅವರ ಕುಟುಂಬ ದುಃಖದ ಮಡುವಿನಲ್ಲಿ ಬಿದ್ದಿತು. ಮಾವ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಸಂಕಟದ ವಾತಾವರಣ ಮೂಡಿದರೆ, ಸಿದ್ಧಾರ್ಥ್ ಹುಟ್ಟಿದ ಚೇತನಹಳ್ಳಿಯಲ್ಲಿ ವಯಸ್ಸಾದ ತಾಯಿ ವಾಸಂತಿ ಹೆಗ್ಡೆ ದುಃಖದ ಸಂಕಟದಿಂದ ಬಳಲಿದರು. ಮಗನ ಅಗಲಿಕೆಯನ್ನು ಮಾತೃ ಹೃದಯ ಸಹಿಸದೆ ಸಂಕಟಪಡುತ್ತಿದ್ದುದು ಹೃದಯ ಕಲಕುವಂತಿತ್ತು.
ಬಂದು ಬಾಂಧವರು, ಹಿತೈಷಿಗಳು ತೋಟದ ಮನೆಗೆ ಆಗಮಿಸತೊಡಗಿದರೆ, ತೋಟದ ಕಾರ್ಮಿಕರು ಹಾಗೂ ಸಿಬ್ಬಂದಿಯನ್ನು ಸಿದ್ಧಾರ್ಥ್ ಸಾವು ಧೃತಿಗೆಡಿಸಿತು. ಅಳುತ್ತಲೇ ಮೃತದೇಹದ ಆಗಮನಕ್ಕೆ ಹಾಗೂ ಅದರ ಅಂತಿಮ ದರ್ಶನಕ್ಕೆ ಕಾದು ನಿಂತರು.
ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆಗಳಲ್ಲಿ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಜನ ಮುಗಿಬಿದ್ದಿದ್ದರು. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗಡಿ- ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಸಿದ್ಧಾರ್ಥ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಸಿದ್ಧಾರ್ಥ್ ಅವರೇ ಸ್ಥಾಪಿಸಿರುವ ನಗರ ಹೊರವಲಯದ ಅಂಬರ್‌ವ್ಯಾಲಿ ಶಾಲೆಯ ಬಳಿ ಶಾಲಾ ಪ್ರಿನ್ಸಿಪಾಲ್ ಹಾಗೂ ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದರು. ಮಧ್ಯಾಹ್ನ 2.30ಕ್ಕೆ ಎಬಿಸಿ ಆವರಣಕ್ಕೆ ಮೃತದೇಹವನ್ನು ತಂದು ಅದಕ್ಕಾಗಿಯೇ ನಿರ್ಮಿಸಿದ್ದ ವೇದಿಕೆಯಲ್ಲಿಡಲಾಯಿತು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪ್ರೇಮಾ ಕೃಷ್ಣ, ಸಿದ್ಧಾರ್ಥ್ ಅವರ ತಾಯಿ ವಾಸಂತಿ ಹೆಗ್ಡೆ, ಪತ್ನಿ ಮಾಳವಿಕಾ, ಪುತ್ರರಾದ ಅಮರ್ಥ್ಯ ಮತ್ತು ಈಶಾನ್ ಅವರು ಸಹ ಆಗಮಿಸಿ ತಮ್ಮ ನಮನ ಸಲ್ಲಿಸಿದರು.
ಸಿದ್ಧಾರ್ಥ್ ಹೆಗ್ಡೆ ಅವರ ಅಂತಿಮ ಸಂಸ್ಕಾರ ಪೂರ್ಣಗೊಂಡ ನಂತರ ಗೌತವಳ್ಳಿಯಿಂದ ಮೂಡಿಗೆರೆ ಹಾಗೂ ಬೇಲೂರು ಕಡೆಗೆ ಹೋಗುವ ಮಾರ್ಗಗಳಲ್ಲಿ ವಾಹನ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೆಲವರು ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರಿಂದಾಗಿ ಯಾವುದೇ ವಾಹನಗಳು ಹೋಗಲು ಸಾಧ್ಯವಾಗದೆ ಗಂಟೆಗಟ್ಟಲೇ ವಾಹನಗಳಲ್ಲಿ ಕಾದು ಕೂರುವಂತಾಗಿತ್ತು. ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸರು ಹರಸಾಹಸ ಪಡಬೇಕಾಯಿತು
Click this button or press Ctrl+G to toggle between Kannada and English