- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಗರಾದ್ಯಂತ ವರಮಹಾಲಕ್ಷ್ಮೀ ಪೂಜೆಗೆ ಸಿದ್ಧತೆ

Varamahalakshmi Pooje [1]ಮಂಗಳೂರು : ನಗರಾದ್ಯಂತ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆಗಳು ಬಿರುಸುಗೊಂಡಿವೆ. ಸಾರ್ವಜನಿಕರು ಪೂಜೆಗೆ ಬೇಕಾದ ಹೂವು, ಬಳೆ, ಅರಶಿನ, ಕುಂಕುಮ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದರೆ, ಇತ್ತ ವ್ಯಾಪಾರ ವಹಿವಾಟೂ ಜೋರಾಗಿದೆ. ದೇವಾಲಯಗಳಲ್ಲಿ ಹಬ್ಬಕ್ಕಾಗಿಯೇ ವಿಶೇಷ ತಯಾರಿಗಳು ನಡೆಯುತ್ತಿವೆ.

ವರಮಹಾಲಕ್ಷ್ಮೀ ಪೂಜೆಗೆ ಮುಖ್ಯವಾಗಿ ಬೇಕಾಗಿರುವುದೇ ಹೂ ಹಣ್ಣುಗಳು. ನಗರದ ಗಲ್ಲಿಗಲ್ಲಿಗಳಲ್ಲಿ ವ್ಯಾಪಾರಸ್ಥರು ಹೂ ಮಾರಾಟದಲ್ಲಿ ತೊಡಗಿದ್ದಾರೆ. ಮಲ್ಲಿಕಟ್ಟೆ, ಬಿಜೈ, ಕಂಕನಾಡಿ, ಹಂಪನಕಟ್ಟೆ, ಸ್ಟೇಟ್ಬ್ಯಾಂಕ್‌ ರಸ್ತೆ ಬದಿಗಳಲ್ಲಿ ಹೊರ ಜಿಲ್ಲೆಗಳಿಂದ ಬಂದ ವ್ಯಾಪಾರಸ್ಥರು ವ್ಯಾಪಾರದಲ್ಲಿ ತೊಡಗಿದ್ದಾರೆ. ಮಲ್ಲಿಗೆ, ಹಬ್ಬಲ್ಲಿಗೆ, ಗುಲಾಬಿ… ಹೀಗೆ ನಾನಾ ರೀತಿಯ ಹೂವುಗಳು ಈಗಾಗಲೇ ನಗರಕ್ಕಾಗಮಿಸಿದ್ದು, ಗುರುವಾರ ಖರೀದಿಗೆ ಜನ ಹೆಚ್ಚು ಬರಬಹುದು ಎಂದು ವ್ಯಾಪಾರಸ್ಥರು ಅಂದಾಜಿಸಿದ್ದಾರೆ. ಜತೆಗೆ ಹಣ್ಣುಗಳ ವ್ಯಾಪಾರವೂ ಭರದಿಂದ ಸಾಗುತ್ತಿವೆ.

ಚಾರ್ಮಾಡಿ ಘಾಟ್ ಬಂದ್‌ನಿಂದಾಗಿ ಬೆಂಗಳೂರು, ಬಯಲುಸೀಮೆ ಭಾಗಗಳಿಂದ ಹೂ ಹಣ್ಣು, ತರಕಾರಿಗಳನ್ನು ಶಿರಾಡಿಘಾಟ್ ಮೂಲಕವೇ ತರಬೇಕಾಗುತ್ತದೆ. ಆದರೆ, ಶಿರಾಡಿಘಾಟ್‌ನಲ್ಲಿ ವಾಹನದಟ್ಟಣೆಯೂ ಹೆಚ್ಚಿರುವುದರಿಂದ ವ್ಯಾಪಾರಸ್ಥರು ತುಸು ಪ್ರಯಾಸ ಪಡುವಂತಾಗಿದೆ.

ನಾಗರಪಂಚಮಿ ನಾಲ್ಕೇ ದಿನಗಳಲ್ಲಿ ವರಮಹಾಲಕ್ಷ್ಮೀ ಪೂಜೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ತರಕಾರಿಗೂ ಬೇಡಿಕೆ ಕುದಿರಿದೆ. ತರಕಾರಿಗಳನ್ನು ಚಿಕ್ಕಮಗಳೂರು, ಬೆಂಗಳೂರು, ಹಾಸನ ಕಡೆಯಿಂದ ತರಿಸಲಾಗುತ್ತದೆ.

ವರಮಹಾಲಕ್ಷ್ಮೀ ಹಬ್ಬ ವಿಶೇಷವಾಗಿ ಮಹಿಳೆಯರ ಹಬ್ಬ. ಅಲ್ಲದೆ ಮನೆಗಳಲ್ಲಿ ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು, ಸುತ್ತಮುತ್ತಲಿನ ಮನೆಗಳ ಹೆಣ್ಮಕ್ಕಳನ್ನು ಕರೆದು ಹಬ್ಬದ ಊಟ ನೀಡುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದಕ್ಕಾಗಿಯೇ ಹೆಂಗಳೆಯರು ಬಿರುಸಿನ ಖರೀದಿಯಲ್ಲಿ ತೊಡಗಿದ್ದಾರೆ.

ವರ ಮಹಾಲಕ್ಷ್ಮಿ ಪೂಜೆ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳಲ್ಲಿಯೂ ತಯಾರಿ ಜೋರಾಗಿದೆ. ವರ ಮಹಾಲಕ್ಷ್ಮೀ ಹಬ್ಬದಂದು ವಿವಿಧ ದೇವಸ್ಥಾನಗಳಲ್ಲಿಯೂ ಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ವಿಶೇಷವಾಗಿ ದೇವಿ ದೇವಸ್ಥಾನಗಳಲ್ಲಿ ಹೆಣ್ಣು ಮಕ್ಕಳು ವಿಶೇಷ ಪೂಜೆಗಳನ್ನು ನೆರವೇರಿಸುತ್ತಾರೆ. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಬೋಳೂರು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಜರಗಲಿದೆ.

ಕದ್ರಿ ಶ್ರೀ ಮಂಜುನಾಥ ದೇಗುಲ, ಕುದ್ರೋಳಿ ಶ್ರೀ ಗೋಕರ್ಣನಾಥ ದೇಗುಲ, ಶರವು ಶ್ರೀ ಮಹಾಗಣಪತಿ ದೇಗುಲ, ಮಣ್ಣಗುಡ್ಡೆ ಹರಿದಾಸಲೇನಿನಲ್ಲಿರುವ ಶ್ರೀ ನವದುರ್ಗಾ ಮಹಾಗಣಪತಿ ದೇಗುಲ, ಮರೋಳಿ ಶ್ರೀ ಸೂರ್ಯನಾರಾಯಣ ದೇಗುಲ ಸಹಿತ ವಿವಿಧೆಡೆ ವರ ಮಹಾಲಕ್ಷ್ಮೀ ಪೂಜೆ ಆ. 9ರಂದು ನಡೆಯಲಿದೆ.