- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಳ್ತಂಗಡಿ : 15ಕ್ಕೂ ಹೆಚ್ಚು ಗ್ರಾಮಗಳು ಮತ್ತು ನೂರಾರು ಮನೆಗಳು ಜಲಾವೃತ

beltangadi [1]ಬೆಳ್ತಂಗಡಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹರಿಯುತ್ತಿರುವ ನದಿ ಮತ್ತು ಉಪನದಿಗಳಲ್ಲಿ ಶುಕ್ರವಾರ ನಿರೀಕ್ಷೆ ಮೀರಿದ ಪ್ರವಾಹ ಉಂಟಾಗಿ ತಾಲೂಕಿನ ಸುಮಾರು 15ಕ್ಕೂ ಅಧಿಕ ಗ್ರಾಮಗಳ ನೂರಾರು ಮನೆಗಳು ಜಲಾವೃಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ತಾಲೂಕಿನ ನೇತ್ರಾವತಿ, ಕಪಿಲ, ಮೃತ್ಯುಂಜಯ, ಸೋಮಾವತಿ ನದಿಗಳು, ನೆರಿಯ ಮತ್ತು ಅಣಿಯೂರು ಹೊಳೆಯಲ್ಲಿ ಪ್ರವಾಹದ ನೀರು ಉಕ್ಕಿಹರಿದಿತ್ತು. ಶುಕ್ರವಾರ ಮುಂಜಾನೆಯೇ ಪ್ರವಾಹ ಹರಿದು ಬಂದಿದ್ದು, ಬೆಳಗ್ಗೆಜನರು ಏಳುವ ಹೊತ್ತಿಗೆ ಮನೆಯಂಗಳದಲ್ಲಿ ನೆರೆ ಕಂಡು ಬೆಚ್ಚಿದರು.

ಲಾೖಲ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಮುಂಡಾಜೆ, ಕಲ್ಮಂಜ, ಚಾರ್ಮಾಡಿ, ಪುದುವೆಟ್ಟು, ಧರ್ಮಸ್ಥಳ, ಶಿಶಿಲ, ಕೊಕ್ಕಡ, ನಿಡ್ಲೆ, ಬೆಳಾಲು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ವಾಗಿತ್ತು.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟವು ಶುಕ್ರವಾರ ಬೆಳಗ್ಗೆಯೇ ಮುಳುಗಡೆಯಾಗಿದ್ದು, ಮಧ್ಯಾಹ್ನದ ವೇಳೆಗೆಹೆಚ್ಚಿನ ಪ್ರಮಾಣದ ನೀರು ಕಂಡುಬಂದಿತ್ತು. ನೂರಾರು ಮನೆಗಳು ಜಲಾವೃತವಾಗಿರುವ ಜೊತೆಗೆ ಸಾವಿರಾರು ಎಕರೆ ಅಡಿಕೆ ತೋಟಗಳು, ಭತ್ತ, ರಬ್ಬರ್‌ ಬೆಳೆಗಳು ಜಲಾವೃತಗೊಂಡಿದ್ದವು.

ಪ್ರವಾಹದ ನೀರಿನಿಂದಾಗಿ 15ಕ್ಕೂ ಅಧಿಕ ಗ್ರಾಮಗಳ ಅನೇಕ ಮನೆಗಳು ಜಲಾವೃತಗೊಂಡಿದ್ದು, ಮನೆಗಳ ನಿಖರವಾದ ಸಂಖ್ಯೆ ಸಿಕ್ಕಿಲ್ಲ. ಸಂತ್ರಸ್ತರಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಹಾರದ ಕ್ರಮ ಕೈಗೊಂಡಿದ್ದಾರೆ. ಸಾಕಷ್ಟು ಕೃಷಿ ಪ್ರದೇಶವೂ ಜಲಾವೃತವಾಗಿದೆ ಎಂದು  ಗಣಪತಿ ಶಾಸ್ತ್ರಿ ತಹಶೀಲ್ದಾರ್ ಹೇಳಿದ್ದಾರೆ.