- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾನೂನಿಗೆ ಅಡ್ಡಿ ಮಾಡಬೇಡಿ ಅಧಿಕಾರಿಗಳಿಗೆ ಮುಖ್ಯಮಂತ್ರಿಸೂಚನೆ

Yedyurappa Dharmasthala [1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಹಾನಿ ವೀಕ್ಷಣೆ ಮಾಡಿದ ಬಳಿಕ ಧರ್ಮಸ್ಥಳದಲ್ಲಿ ಅಧಿಕಾರಿಗಳು, ಶಾಸಕರು ಮತ್ತು ಸಂಸದರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಮನೆ ಕಳೆದುಕೊಂಡವರಿಗೆ 5 ಲಕ್ಷ, ಭಾಗಶಃ ಮನೆ ಕಳೆದುಕೊಂಡವರಿಗೆ‌ 1 ಲಕ್ಷ, ಮತ್ತು ಮನೆ ಕಟ್ಟುವ ಇನ್ನೂ ಏಳೆಂಟು ತಿಂಗಳ ತನಕ ಪ್ರತಿ ತಿಂಗಳಿಗೆ 5 ಸಾವಿರ ಬಾಡಿಗೆ ಮತ್ತು ತಕ್ಷಣದ ಪರಿಹಾರ 10 ಸಾವಿರ ಇವತ್ತೆ ನೀಡುವಂತೆ ಘೋಷಿಸಿದ್ದೇನೆ. ಇದನ್ನು ಸಂತ್ರಸ್ತರಿಗೆ ನೀಡುವಲ್ಲಿ ಯಾವುದೇ ಕಾನೂನು ತೊಡಕು ಮಾಡಬೇಡಿ ಎಂದು ಸೂಚಿಸಿದರು.

ಭಾರಿ ಮಳೆ ಮತ್ತು ನೆರೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾನೂನಿಗೆ ಅಡ್ಡಿ ‌ಮಾಡಬೇಡಿ ಮತ್ತು ರಜೆ ತೆಗೆದು ಕೊಳ್ಳಬೇಡಿ ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೆರೆ ಹಾನಿಯಿಂದ ಸಮಸ್ಯೆಯಾಗಿರುವುದರಿಂದ ಸಮಸ್ಯೆ ಬಗೆಹರಿಯುವ ತನಕ ಅಧಿಕಾರಿಗಳು ರಜೆ ತೆಗೆದುಕೊಳ್ಳಬೇಡಿ ಎಂದು ವಿನಂತಿಸಿದರು. ಮಂಗಳೂರಿನ ಪಚ್ಚನಾಡಿಯಲ್ಲಿ ಡಂಪಿಂಗ್ ಯಾರ್ಡ್ ಸುಮಾರು 25 ಮನೆಗಳಿಗೆ ಬಿದ್ದು ಹಾನಿಯಾಗಿರುವ ಬಗ್ಗೆ ಸಭೆಯಲ್ಲಿ ಗಮನಸೆಳೆದಾಗ ಅವರಿಗೆ ಬೇರೆ ಕಡೆ ಮನೆ ನಿರ್ಮಾಣ ಮಾಡಿಕೊಡುವಂತೆ ಸೂಚಿಸಿದರು. ಕಡಲ್ಕೊರೆತ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನೆರೆಯ ಬಳಿಕ ಬರುವ ಸಾಂಕ್ರಾಮಿಕ ರೋಗ ತಡೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳ ಜೊತೆ ಸಿಎಂ ಪ್ರವಾಹ ಪರಿಹಾರ ಸಭೆನಂತರ ಮಾತನಾಡಿದ ಮಾಜಿ ಸಚಿವ ಯು ಟಿ ಖಾದರ್‌ ಅವರು ಮುಖ್ಯಮಂತ್ರಿಗಳು ಈಗ ಘೋಷಿಸಿರುವ 5 ಲಕ್ಷ ಪರಿಹಾರ ಹೆಚ್ಚಿಸುವಂತೆ ಮತ್ತು ಮನೆಗಳಲ್ಲಿ ಹಾನಿಯಾಗಿರುವ ಎಲೆಕ್ಟ್ರಾನಿಕ್ ವಸ್ತುಗಳಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಗಳನ್ನು ಆಗ್ರಹಿಸಿದರು.

ಸಭೆಯಲ್ಲಿ ದ‌.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಶಾಸಕರುಗಳಾದ ಸಂಜೀವ ಮಠಂದೂರು, ಅಂಗಾರ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.