- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲು : ರಾಜ್ಯಾಧ್ಯಕ್ಷ ಸ್ಥಾನ ಹುದ್ದೆಯಾಗಿ ಅಲ್ಲ, ಜವಾಬ್ದಾರಿಯಾಗಿ ಸ್ವೀಕರಿಸುತ್ತೇನೆ

Nalin-kumar [1]ಮಂಗಳೂರು : ಯಾವುದೇ ಪದವಿ ನಿರೀಕ್ಷಿಸದೆ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷದ ನಾಯಕರು ಮತ್ತು ಹಿರಿಯರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು, ಅದನ್ನು ಹುದ್ದೆಯಾಗಿ ಅಲ್ಲ, ಜವಾಬ್ದಾರಿಯಾಗಿ ಸ್ವೀಕರಿಸುತ್ತೇನೆ ಎಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬುಧವಾರ ಬಿಜೆಪಿ ಕಚೇರಿಗೆ ಆಗಮಿಸಿ, ನಾಯಕರು, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಚಿಕ್ಕಂದಿನಲ್ಲೇ ಸಂಘ ಪರಿವಾರದ ಕಾರ್ಯಕರ್ತನಾಗಿ ಹಲವು ಸವಾಲುಗಳ ಮಧ್ಯೆ ಈಜುತ್ತಲೇ ಇಲ್ಲಿವರೆಗೆ ಬಂದಿದ್ದೇನೆ. ಭಾರತ ಮಾತೆಯ ಗೌರವವನ್ನು ಬೆಳಗಿಸುವ ಉದ್ದೇಶದೊಂದಿಗೆ ಸಂಘದಲ್ಲಿ ತೊಡಗಿಕೊಂಡಿದ್ದ ನನ್ನನ್ನು ಬೆಳೆಸಿರುವುದು ಸಂಘ ಎಂದರು.

ಪಕ್ಷದ ಕಾರ್ಯಾಲಯ ದೇವಾಲಯ; ಕಾರ್ಯಕರ್ತರು ನನ್ನ ಪಾಲಿನ ದೇವರು. ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪೂರ್ವದಲ್ಲಿ ಕಾರ್ಯಕರ್ತರನ್ನು ಭೇಟಿ ಯಾಗಿ ಕಟೀಲು ದೇವಿಯ ಅನುಗ್ರಹ ಪಡೆದು ಬೆಂಗಳೂರಿಗೆ ತೆರಳುತ್ತೇನೆ ಎಂದರು.

ಪಕ್ಷದ ಸಿದ್ಧಾಂತಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಹಿರಿಯರು ಮತ್ತು ಕಿರಿಯ ಕಾರ್ಯ ಕರ್ತರನ್ನು ವಿಶ್ವಾಸದಲ್ಲಿ ಇರಿಸಿಕೊಂಡು ಜವಾಬ್ದಾರಿ ನಿರ್ವಹಿಸಲಿದ್ದೇನೆ. ಪಕ್ಷಕ್ಕೀಗ ಸುವರ್ಣ ಯುಗ. ಜವಾಬ್ದಾರಿಯೊಂದಿಗೆ ಆತ್ಮವಿಶ್ವಾಸದ ಜತೆ, ಎಚ್ಚರಿಕೆ, ಭಯವೂ ನನ್ನಲ್ಲಿದೆ ಎಂದರು.

ಮಾಜಿ ವಿಧಾನ ಪರಿಷತ್‌ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಸಂಘ ತೋರಿದ ದಾರಿಯಲ್ಲಿ ನಡೆದವರು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. 16ನೇ ವಯಸ್ಸಿನಿಂದ ಸಂಘದ ಜವಾಬ್ದಾರಿ ಹೊತ್ತ ನಳಿನ್‌ಗೆ ರಾಜ್ಯಾಧ್ಯಕ್ಷ ಸ್ಥಾನ ದೊರೆತಿದೆ. ಪಕ್ಷದ ಕಾರ್ಯಕರ್ತರು ಯಾವ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳದೆ ಹಿರಿಯರ ಮಾತುಗಳನ್ನು ಪಾಲಿಸುತ್ತ ನಳಿನ್‌ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.

ಪಕ್ಷದ ಮುಖಂಡರಾದ ಜಗದೀಶ್‌ ಅಧಿಕಾರಿ, ಕಿಶೋರ್‌ ರೈ, ರವಿಶಂಕರ್‌ ಮಿಜಾರು, ರಾಮಚಂದರ್‌ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.