ಬೆಂಗಳೂರು : ಪಿಒಪಿ ಗಣೇಶ ಮೂರ್ತಿಯ ಬಳಕೆ

11:30 AM, Saturday, August 31st, 2019
Share
1 Star2 Stars3 Stars4 Stars5 Stars
(No Ratings Yet)
Loading...

ganesha-murthiಬೆಂಗಳೂರು : ನಗರದಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸಾರ್ವಜನಿಕರು ವಿಭಿನ್ನವಾಗಿ ಆಲೋಚಿಸಿದ್ದಾರೆ. ಪಿಒಪಿ ಗಣೇಶ ಮೂರ್ತಿ ನಿಷೇಧದ ಬಳಿಕ ಮಣ್ಣಿನ ಗಣೇಶ ಟ್ರೆಂಡ್‌ ಹೆಚ್ಚಾಗಿದ್ದು, ವಿಸರ್ಜನೆ ವೇಳೆ ನಡೆಯುವ ಅದ್ದೂರಿ ಉತ್ಸವಕ್ಕೆ ಹಳೆಯ ಪಿಒಪಿ ಗಣೇಶ ಮೂರ್ತಿಗಳನ್ನೇ ಬಳಸುವ ಟ್ರೆಂಡ್‌ ಜೋರಾಗಿದೆ.

2016ರಿಂದ ರಾಜ್ಯದಲ್ಲಿ ಪಿಒಪಿ ಗಣೇಶ ಮಾರಾಟ ಮತ್ತು ಬಳಕೆ ನಿಷೇಧವಾಗಿದ್ದು, ಸಾರ್ವಜನಿಕರಲ್ಲಿ ಪರಿಸರ ಸ್ನೇಹ ಗಣೇಶ ಹಬ್ಬದ ಜಾಗೃತಿ ಹೆಚ್ಚಾಗಿದೆ. ಈ ನಡುವೆಯೂ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕೆಂಬ ಉತ್ಸಾಹವುಳ್ಳ ಯುವಕರು 2016ರಲ್ಲಿ ತಂದಿರುವ ಪಿಒಪಿ ಗಣೇಶ ಮೂರ್ತಿಯನ್ನು ಉತ್ಸವಕ್ಕೆ ಬಳಸುತಿದ್ದಾರೆ.

ಗಣೇಶ ಹಬ್ಬ ಎಂದ ಕೂಡಲೆ ಗಣೇಶ ಅಲಂಕಾರ, ಸಂಗೀತಗೋಷ್ಠಿ ಸೇರಿದಂತೆ ಇನ್ನಿತರ ಆಚರಣೆಗಳೇ ಮನೆ ಮಾಡಿರುತ್ತವೆ. ಇನ್ನು ವಿಸರ್ಜನೆ ದಿನದಂದು ಗಣೇಶ ಮೂರ್ತಿ ಅಲಂಕಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಹಾಗಾಗಿ ಬಹುತೇಕ ಗಣಪತಿ ಉತ್ಸವ ಸಮಿತಿಗಳು ದೊಡ್ಡ ಗಣೇಶ ಮೂರ್ತಿ ಉತ್ಸವಕ್ಕೆ ಬಳಸಲು ಇಷ್ಟಪಡುತ್ತಾರೆ.

ನಗರದ ಬಸವನಗುಡಿಯ ಬೆಂಗಳೂರು ಗಣೇಶ ಉತ್ಸವ ದಕ್ಷಿಣ ಭಾರತದಲ್ಲೇ ಹೆಚ್ಚು ಖ್ಯಾತಿಯನ್ನು ಗಳಿಸಿದೆ. ಇಲ್ಲಿ ಕಳೆದ 57 ವರ್ಷಗಳಿಂದ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ವಿದ್ಯಾರಣ್ಯ ಯುವಕರ ಬಳಗದ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈವರೆಗೆ ವಿಭಿನ್ನವಾಗಿ ಗಣೇಶ ಹಬ್ಬವನ್ನು ಆಚರಿಸುತ್ತಾ ಬಂದಿರುವ ವಿದ್ಯಾರಣ್ಯ ಯುವಕರ ಬಳಗ ಕಳೆದ ನಾಲ್ಕು ವರ್ಷಗಳಿಂದ ಒಂದೇ ಗಣೇಶ ಮೂರ್ತಿಯನ್ನು ಉತ್ಸವಕ್ಕೆ ಬಳಸುತಿದ್ದಾರೆ.

ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶ ಮೂರ್ತಿ ಬಳಸದಿರಲು ತೀರ್ಮಾನಿಸಿರುವ ಬಳಗ ಮುಂದಿನ 10ವರ್ಷಗಳ ಕಾಲ ಇದೇ ಮೂರ್ತಿಯನ್ನು ಉತ್ಸವಕ್ಕೆ ಬಳಸಲು ತೀರ್ಮಾನಿಸಿದೆ. ಇದೇ ರೀತಿ ನಗರದ ಬಾಣಸವಾಡಿ, ವಸಂತನಗರ, ಶಿವಾಜಿನಗರ, ಗಿರಿನಗರ, ಶ್ರೀನಗರ ಪ್ರದೇಶಗಳಲ್ಲಿ 40 ವರ್ಷಗಳ ಹಿಂದಿನಿಂದಲೂ ಬೆಂಗಳೂರು ಗಣೇಶ ಉತ್ಸವ ಸಮಿತಿಗಳು ಸಕ್ರಿಯವಾಗಿ ಪ್ರತಿ ವರ್ಷ ಗಣೇಶ ಹಬ್ಬವನ್ನು ಆಚರಿಸುತ್ತಿವೆ.

ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಈ ಉತ್ಸವ ಸಮಿತಿಗಳು ಬೆಂಗಳೂರಿನ ಅತೀ ಹಳೆಯ ಗಣೇಶ ಉತ್ಸವ ಸಮಿತಿಗಳಾಗಿವೆ. ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಇಲ್ಲಿನ ಆಚರಣೆಗಳು ವಿಭಿನ್ನ ಮತ್ತು ಅದ್ದೂರಿಯಾಗಿರುತ್ತವೆ. ಪಿಒಪಿ ಗಣೇಶ ಮೂರ್ತಿ ನಿಷೇಧದ ಬಳಿಕ ಈ ಎಲ್ಲಾ ಉತ್ಸವ ಸಮಿತಿಗಳು ಒಂದೇ ಗಣೇಶ ಮೂರ್ತಿಯನ್ನು ಉತ್ಸವಕ್ಕೆ ಬಳಸುತ್ತಿವೆ.

ಮತ್ತು ಪರಿಸರ ರಕ್ಷಣೆ ಬಗ್ಗೆ ಹೆಚ್ಚಾದ ಜಾಗೃತಿಯಿಂದ ಕ್ರಮೇಣವಾಗಿ ಗಣೇಶ ಮೂರ್ತಿ ಮರು ಬಳಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಶಿವಾಜಿನಗರ ಗಣೇಶ ಉತ್ಸವ ಸಮಿತಿ ಸದಸ್ಯ ಶ್ರೀನಿವಾಸ್‌. ಟ್ಯಾನೆರಿ ರಸ್ತೆ ಮತ್ತು ಬಂಬೂ ಬಜಾರ್‌ನಲ್ಲೂ ಹಳೆಯ ಗಣೇಶ ಮೂರ್ತಿಗಳನ್ನು ಉತ್ಸವಕ್ಕೆ ಬಳಸಲಾಗುತ್ತಿದೆ. ಇಲ್ಲಿ ಸುಮಾರು 21 ರಿಂದ 23 ಅಡಿಯ ಗಣೇಶ ಮೂರ್ತಿಯನ್ನು ಉತ್ಸವಕ್ಕೆ ಬಳಸಲಿದ್ದು, ಉತ್ಸವದ ಬಳಿಕ ಮೂರ್ತಿಯನ್ನಿರಿಸಲು ದೇವಸ್ಥಾನದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಗಣೇಶ ಹಬ್ಬ ಆಚರಣೆ ಬಳಿಕ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದು ಪ್ರತೀತಿ. ಅದರಂತೆಯೇ ನೀರಿನಲ್ಲಿ ಮುಳುಗಿಸಲೆಂದೇ ಒಂದು ಸಣ್ಣ ಮಣ್ಣಿನ ಗಣೇಶ ಮೂರ್ತಿಯನ್ನು ಪೂಜೆಗೆ ಬಳಸಲಾಗುತ್ತದೆ. ಇನ್ನು ಅಲಂಕಾರ, ಉತ್ಸವಕ್ಕಾಗಿ ಹಳೆಯ ಪಿಒಪಿ ಗಣೇಶ ಮೂರ್ತಿಯನ್ನು ಬಳಸಲಾಗುತ್ತದೆ.

ಮಣ್ಣಿನ ಗಣೇಶ ಮೂರ್ತಿಯನ್ನು ಗರಿಷ್ಠ ಐದು ದಿನಗಳ ಕಾಲ ಕೂರಿಸಬಹುದು, ಇದಕ್ಕಿಂತ ಹೆಚ್ಚು ಕಾಲ ಕೂರಿಸಿದರೆ ಮೂರ್ತಿ ಬಿರುಕು ಬಿಡುತ್ತದೆ. ಮಣ್ಣಿನ ಮೂರ್ತಿಗೆ ಹೆಚ್ಚಿನ ತೂಕದ ಲೈಟಿಂಗ್ಸ್‌ ಮತ್ತು ಹೂವುಗಳಿಂದ ಅಲಂಕಾರ ಮಾಡಲು ಸಾಧ್ಯವಿಲ್ಲ.

ಬಣ್ಣ ಹೆಚ್ಚು ಕಾಲ ಉಳಿಯುವುದಿಲ್ಲ, ಸಾಗಾಟದ ವೇಳೆ ಮೂರ್ತಿ ಹಾಳಾಗುವ ಸಾದ್ಯತೆ ಹೆಚ್ಚಿದೆ ಮತ್ತು ಹೆಚ್ಚು ಭಾರ ಹೊಂದಿರುತ್ತದೆ. ಇದಲ್ಲದೇ ಐದು ಅಡಿಗಿಂತ ಗೊಡ್ಡ ಗಾತ್ರದ ಮೂರ್ತಿಗಳನ್ನು ಮಣ್ಣಿನಿಂದ ನಿರ್ಮಿಸಲು ಕಷ್ಟ ಎಂಬ ಕಾರಣಕ್ಕೆ ಬಹುತೇಕ ಮಂದಿ ಪಿಒಪಿ ಗಣೇಶ ಮೂರ್ತಿಯನ್ನೇ ಬಳಸಲು ಬಯಸುತ್ತಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English