ಮಂಗಳೂರು : ಮಹಾತ್ಮಾ ಗಾಂಧೀಜಿಯವರು ಹೇಳಿದಂತೆ ‘ಸ್ವಾತಂತ್ರ್ಯಕ್ಕಿಂತಲೂ ಶುಚಿತ್ವ ಮಹತ್ವವಾದುದು’ ಎಂಬ ನೆಲೆಯಲ್ಲಿ ಸ್ವಚ್ಛತೆಯತ್ತ ಪ್ರತಿಯೊಬ್ಬರು ಗಮನ ನೀಡಬೇಕು. ವಿಶೇಷವಾಗಿ ಯುವಜನರು ಸ್ವಚ್ಚತೆಯನ್ನು ಮೈಗೂಡಿಸಿಕೊಂಡು ಅದನ್ನು ಸಮಾಜದಲ್ಲಿ ಪಸರಿಸುವ ಕೆಲಸ ಮಾಡುವಂತಾಗಬೇಕು ಎಂದು ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಮುಖ್ಯಸ್ಥ ಡಾ| ಶಿಶಿರ್ ಶೆಟ್ಟಿ ಹೇಳಿದರು.
ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ 4 ವರ್ಷಗಳಿಂದ ಹಮ್ಮಿಕೊಳ್ಳಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 40ನೇ ಶ್ರಮದಾನವನ್ನು ಕೂಳೂರು ಪರಿಸರದಲ್ಲಿ ರವಿವಾರ ಕೈಗೊಳ್ಳಲಾಯಿತು.
ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕ ಗುರುಚಂದ್ರ ಹೆಗ್ಡೆ ಮಾತನಾಡಿ, ಭಾರತ ಮುಂಬರುವ ದಿನಗಳಲ್ಲಿ ವಿಶ್ವದ ಮುಂದೆ ತಲೆಯೆತ್ತಿ ನಿಲ್ಲಬೇಕಾದರೆ ಸ್ವಚ್ಛತೆಯನ್ನು ಮೈಗೂಡಿಕೊಳ್ಳುವಂತಾಗಬೇಕು. ಪ್ರಧಾನಿಗಳ ಆಶಯದಂತೆ ದೇಶಾದ್ಯಂತ ಸ್ವಚ್ಛತಾ ಅಭಿಯಾನ ಸೂಕ್ತ ಜನಸ್ಪಂದನೆಯಿಂದ ಜಾಗೃತಿ ಉಂಟಾಗುತ್ತಿದೆ. ಪ್ರತಿ ಭಾರತೀಯನು ತನ್ನ ಮನೆ, ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಂತಾಗಲು ಇಂತಹ ಶ್ರಮದಾನಗಳು, ಜಾಗೃತಿ ಕಾರ್ಯಕ್ರಮಗಳು ಆವಶ್ಯಕ. ಈ ಸಂದರ್ಭ ಸ್ವಚ್ಛ ಮಂಗಳೂರು ಕಾರ್ಯಕರ್ತರ ಜತೆಯಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಹೇಳಿ ಶುಭ ಹಾರೈಸಿದರು.
ಡಾ| ಧನೇಶ್ ಕುಮಾರ್, ರಂಜನ್ ಬೆಳ್ಳರ್ಪಾಡಿ, ನಿತ್ಯಾನಂದ ಕುಲಾಲ್, ಧನಂಜಯ ಕಾವೂರು ಪ್ರೊ. ಭಾರತಿ ಭಟ್, ಡಾ| ಪುರುಷೋತ್ತಮ ಚಿಪ್ಪಾಲ, ಸೌಮ್ಯ ಶ್ರೀವತ್ಸ, ಕೃಷ್ಣಪ್ರಸಾದ್ ಹಾಗೂ ಇನ್ನಿತರ ಕಾರ್ಯಕರ್ತರು ಶ್ರಮದಾನದಲ್ಲಿ ಪಾಲ್ಗೊಂಡರು.
ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಸ್ವಯಂಸೇವರನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು.
ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು, ಬೆಸೆಂಟ್ ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಸ್ವಚ್ಛ ಮಂಗಳೂರು ಕಾರ್ಯಕರ್ತರು ಸುಮಾರು 6 ಗುಂಪುಗಳಾಗಿ ವಿಂಗಡಿಸಿಕೊಂಡು ಸ್ವಚ್ಛತಾ ಕಾರ್ಯ ನಡೆಸಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಕಮಲಾಕ್ಷ ಪೈ ನೇತೃತ್ವದಲ್ಲಿ ಕೂಳೂರು ಕಾವೂರು ರಸ್ತೆಯಲ್ಲಿಯ ಕಾಲುದಾರಿಯಲ್ಲಿ ಹಾಕಲಾಗಿದ್ದ ತ್ಯಾಜ್ಯ ರಾಶಿಯನ್ನು ತೆರವು ಮಾಡಿದರು. ವಿಟuಲದಾಸ್ ಪ್ರಭು ಮಾರ್ಗದರ್ಶನದಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು ರಾಯಕಟ್ಟೆ ಅಡ್ಡರಸ್ತೆ ತಿರುವಿನಲ್ಲಿಯ ಕಸವನ್ನು ತೆಗೆದು ಸ್ವಚ್ಛಗೊಳಿಸಿದರು. ಯೋಗೀಶ್ ಕಾಯರ್ತಡ್ಕ, ಉಮಾಕಾಂತ್ ಇನ್ನಿತರ ಸ್ವಯಂಸೇವಕರು ಅಂಬಿಕಾ ನಗರ ಬಸ್ ತಂಗುದಾಣದ ಎದುರುಗಡೆುದ್ದ ತ್ಯಾಜ್ಯರಾಶಿಯನ್ನು ತೆರವು ಮಾಡಿ ಅಲ್ಲಿದ್ದ ಹುಲ್ಲು ಕಳೆಯನ್ನು ತೆಗೆದು ಹಸನು ಮಾಡಿದರು.
ಪುನಿತ್ ಪೂಜಾರಿ, ಮೆಹಬೂಬ್ ಖಾನ್, ಕಾರ್ಯಕರ್ತರು ಶಾಂತಿನಗರ ಗ್ರೌಂಡ್ ಬಳಿಯಿದ್ದ ತ್ಯಾಜ್ಯ ರಾಶಿಯನ್ನು ತೆಗೆದರು. ಹರೀಶ್ ಪ್ರಭು, ಶಿವು ಪುತ್ತೂರು, ಬಾಲಕೃಷ್ಣ ಭಟ್ ಅವರು ಕೂಳೂರು ಕಾವೂರು ರಸ್ತೆಯ ಮಧ್ಯೆ ಇದ ್ದತ್ಯಾಜ್ಯ ರಾಶಿಯನ್ನು ಸ್ವಚ್ಛ ಮಾಡಿದರು. ಉಪನ್ಯಾಸಕ ಪ್ರಕಾಶ್ ಎಸ್.ಎನ್., ಅನಿರುದ್ಧ ನಾಯಕ್ ನೇತೃತ್ವದಲ್ಲಿ ಫ್ಲೈಓವರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.
ಮಾಜಿ ಕಾರ್ಪೊರೇಟರ್ ಸುರೇಶ್ ಶೆಟ್ಟಿ , ಶಾರದ ವಿದ್ಯಾಲಯದ ವಿದ್ಯಾರ್ಥಿನಿಯರು ಕೂಳೂರಿನಲ್ಲಿರುವ ಅಂಗಡಿ, ಮನೆಗಳಿಗೆ ತೆರಳಿ ಸ್ವಚ್ಛತೆ, ಮಲೇರಿಯಾ, ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮವನ್ನು ಮಾಡಿದರು. ಅಭಿಯಾನದ ಪ್ರಮುಖರಾದ ಉಮಾನಾಥ್ ಕೊಟೆಕಾರ್, ದಿಲ್ರಾಜ್ ಆಳ್ವ ಶ್ರಮದಾನದ ಜವಾಬ್ದಾರಿ ವಹಿಸಿದ್ದರು.
ಕೂಳೂರಿನಿಂದ ಕಾವೂರಿನತ್ತ ಸಾಗುವ ಮುಖ್ಯ ರಸ್ತೆಯಲ್ಲಿಯ ಒಟ್ಟು ಒಂಬತ್ತು ತ್ಯಾಜ್ಯಬೀಳುತ್ತಿದ್ದ ಸ್ಥಳಗಳನ್ನು ಗುರುತಿಸಿ ಇಂದು ಸ್ವಚ್ಛಗೊಳಿಸಲಾಗಿದೆ. ಇದೀಗ ಸ್ವಚ್ಛಗೊಳಿಸಿದ ಜಾಗೆಯಲ್ಲಿ ಅಲಂಕಾರಿಕ ಗಿಡಗಳನ್ನಿಟ್ಟು ಜಾಗವನ್ನು ಅಂದ ತೋರುವಂತೆ ಮಾಡಲಾಗಿದೆ.
ಇಂದಿನಿಂದ ಅಲ್ಲಿ ಸ್ವಚ್ಛತಾ ಯೋಧರ ತಂಡ ಸುಧೀರ್ ನರೋಹ್ನ, ಜಗನ್ ಕೋಡಿಕಲ್ ನೇತೃತ್ವದಲ್ಲಿ ಹಗಲಿರುಳು ಕಾವಲು ಕಾಯಲಿದ್ದು, ಬೀದಿಬದಿಯಲ್ಲಿ ಕಸಹಾಕುವವರಿಗೆ ಕಸಹಾಕದಂತೆ ಮನವಿ ಮಾಡಿ ಅರಿವು ಮೂಡಿಸಲಿದ್ದಾರೆ. 40ನೇ ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ದಕ್ಷಿಣ ಕನ್ನಡ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಸ್ವಯಂಸೇವಕರಿಗೆ ಮಜ್ಜಿಗೆ, ಲಸ್ಸಿಯನ್ನು ವ್ಯವಸ್ಥೆಮಾಡಲಾಗಿತ್ತು.
Click this button or press Ctrl+G to toggle between Kannada and English