ಬೆಂಗಳೂರು : ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಕುಸಿದು, ನಿರುದ್ಯೋಗದ ಪ್ರಮಾಣ ಹೆಚ್ಚಳ ವಾಗುತ್ತಿದ್ದರೂ ಬಿಜೆಪಿ ಮಾತ್ರ ದ್ವೇಷದ ರಾಜಕಾರಣ ಮಾಡಿಕೊಂಡು ಬರುತ್ತಿದೆ. ಡಿಕೆ ಶಿವಕುಮಾರ್ ತನಿಖೆಗೆ ಸಹಕರಿಸಿದರೂ, ಅವರನ್ನು ಬಂಧಿಸಿ ಹೇಡಿತನದ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಮಾಜಿ ಸಚಿವ ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರ ಸಂಘಟನೆಗಳು ನ್ಯಾಷನಲ್ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್ ವರೆಗೆ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು ನಾವು ಸುಮ್ಮನೆ ಕೂರಲು ಸಾಧ್ಯವೇ ಇಲ್ಲಾ. ಡಿಕೆ ಶಿವಕುಮಾರ್ ಅವರ ಮಗಳಿಗೂ ನೋಟಿಸ್ ನೀಡಿ ಅವರ ತೇಜೋವಧೆ ಮಾಡುವ ಕೆಲಸ ಮಾಡಲಾಗುತ್ತಿದೆ. ವಿರೋಧ ಪಕ್ಷವನ್ನು ವಿರೋಧಿಸುವುದು ಇಡೀ ದೇಶಕ್ಕೆ ಗಂಡಾಂತರ. ಡಿಕೆ ಶಿವಕುಮಾರ್ ಜೊತೆ ನಾವಿದ್ದೇವೆ ಅವರಿಗೆ ಜಯ ಸಿಕ್ಕೇ ಸಿಗುತ್ತೆ ಎಂದು ಹೇಳಿದರು.
ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ ಐಟಿ, ಸಿಬಿಐ, ಇಡಿಯಲ್ಲಿ ಬಿಜೆಪಿಯ ಸೀಳು ನಾಯಿಗಳಿದ್ದಾರೆ. ಚುನಾವಣಾ ರಣರಂಗದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲಾಗದೇ ವಾಮಮಾರ್ಗದ ಮೂಲಕ ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿಕೆಶಿಯವರನ್ನು ರಾಜಕೀಯವಾಗಿ ಎದುರಿಸಲಾಗದೇ ಅವರನ್ನು ಬಂಧಿಸಲಾಗಿದೆ. ಕೇವಲ 5 ಕೋಟಿ ರೂ.ಗೆ ಮಾತ್ರ ಲೆಕ್ಕ ಕೊಡಬೇಕು. ಅದಕ್ಕೆ ಅವರು ಲೆಕ್ಕ ಕೊಡುತ್ತಾರೆ. ವಿಜಯಮಲ್ಯ ದೇಶಬಿಟ್ಟು ಓಡಿಹೋದಾಗ ಬಿಜೆಪಿಯ ನಾಯಕರು ಎಲ್ಲಿಹೋಗಿದ್ದರು. ಬಿಜೆಪಿಯದ್ದು ಹೇಡಿ ರಾಜಕಾರಣ ಅವರ ಬೆದರಿಕೆಗಳಿಗೆ ನಾವ್ಯಾರು ಜಗ್ಗುವುದಿಲ್ಲ. ಪ್ರತಿಭಟನೆಯಲ್ಲಿ ಕೇವಲ ಒಕ್ಕಲಿಗ ಸಮುದಾಯದವರಷ್ಟೇ ಇಲ್ಲ. ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರು ಇದ್ದಾರೆ ಎಂದು ತಿಳಿಸಿದರು.
ಕರವೆ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಪಕ್ಷ ಕೈಬಿಟ್ಟರೂ ಡಿಕೆಶಿಯವರನ್ನ ಸಮುದಾಯ ಕೈಬಿಡಲ್ಲ. ಸಮುದಾಯ ಇದ್ದರೆ ಮಾತ್ರ ಪಕ್ಷ, ರಾಜಕೀಯ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ .ಡಿಕೆಶಿಯನ್ನು ರಾಜಕೀಯವಾಗಿ ಹಣಿಯಲು ಷಡ್ಯಂತ್ರ ಮಾಡಲಾಗುತ್ತಿದೆ. ಇಡೀ ಒಕ್ಕಲಿಗ ಸಮುದಾಯ ಡಿಕೆಶಿ ಬೆಂಬಲಕ್ಕಿದೆ. ಅವರಿಗೆ ಕಾನೂನು ಹೋರಾಟದಲ್ಲಿ ಗೆಲುವಾಗುತ್ತದೆ ಎಂದರು.
ಪ್ರತಿಭಟನೆಗೆ ಆಗಮಿಸಿದ ಒಂದು ಗುಂಪಿನಿಂದ ಚಲುವರಾಯಸ್ವಾಮಿ ಭಾಷಣಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆ ಅರ್ಧಕ್ಕೆ ಮಾತು ಮೊಟಕುಗೊಳಿಸಿ ತೆರಳಿದರು.
ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧನ ಹಿನ್ನೆಲೆ ಬೆಂಗಳೂರಿನಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗುತ್ತಿದೆ. ಜಯನಗರ ಅಶೋಕ ಪಿಲ್ಲರ್ ಬಳಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಬಸ್ ಗಾಜು ಪುಡಿ ಪುಡಿಯಾಗಿದೆ.
Click this button or press Ctrl+G to toggle between Kannada and English