ಚೆನ್ನೈ : ಕಳೆದ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯ ದಾಳಿಗೆ ನಾಮಾವಶೇಷವಾಗಿದ್ದ ಜೈಶ್-ಎ-ಮಹಮ್ಮದ್ ಉಗ್ರ ಸಂಘಟನೆಯ ಬಾಲಾಕೋಟ್ ಉಗ್ರ ತರಬೇತಿ ಶಿಬಿರ ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನೀಡಿದ್ದಾರೆ.
ಫೆಬ್ರವರಿ 26ರ ವಾಯು ದಾಳಿಯಲ್ಲಿ ಬಾಲಾಕೋಟ್ ಉಗ್ರ ತರಬೇತಿ ಶಿಬಿರ ಸಂಪೂರ್ಣವಾಗಿ ಹಾನಿಗೊಂಡಿತ್ತು ಮತ್ತು ನಾಶವಾಗಿತ್ತು. ಆದರೆ ಇದೀಗ ಮತ್ತೆ ಅದನ್ನು ಪುನರ್ ಸ್ಥಾಪಿಸಲಾಗಿದೆ ಎಂದು ರಾವತ್ ಅವರು ಮಾಹಿತಿ ನೀಡಿದರು. ಇಷ್ಟು ಮಾತ್ರವಲ್ಲದೇ ಸುಮಾರು 500 ನುಸುಳುಕೋರರು ಭಾರತದ ನೆಲದೊಳಗೆ ನುಸುಳಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿಯನ್ನೂ ಸಹ ರಾವತ್ ಅವರು ನೀಡಿದರು.
ಭಾರತದ ಭೂಪ್ರದೇಶದೊಳಗೆ ಉಗ್ರರನ್ನು ನುಗ್ಗಿಸುವ ಉದ್ದೇಶದಿಂದಲೇ ಪಾಕಿಸ್ಥಾನವು ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಆದರೆ ಇದನ್ನು ಹೇಗೆ ನಿಗ್ರಹಿಸಬೇಕೆಂದು ನಮಗೆ ತಿಳಿದಿದೆ ಎಂದು ರಾವತ್ ಅವರು ಹೇಳಿದರು. ನಮ್ಮ ಯೋಧರು ಉಗ್ರರ ಒಳನುಸುಳುವಿಕೆಯನ್ನು ತಡೆಯಲು ಸೂಕ್ತ ಕ್ರಮಗಳನ್ನು ಗಡಿಭಾಗದಲ್ಲಿ ಕೈಗೊಂಡಿದ್ದಾರೆ. ನಮ್ಮ ಯೋಧರು ಸದಾ ಎಚ್ಚರದಿಂದಿದ್ದು ಗರಿಷ್ಠ ಪ್ರಮಾಣದ ಒಳನುಸುಳುವಿಕೆಯನ್ನು ತಡೆಯುವ ಪ್ರಯತ್ನದಲ್ಲಿದ್ದಾರೆ ಎಂದೂ ಸಹ ಸೇನಾ ಮುಖ್ಯಸ್ಥರು ತಿಳಿಸಿದರು.
ಬಾಲಾಕೋಟ್ ಮಾದರಿಯ ದಾಳಿಯನ್ನು ಭಾರತ ಪುನರಾವರ್ತಿಸುವ ಯೋಚನೆಯಲ್ಲಿದೆಯೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜನರಲ್ ರಾವತ್ ಅವರು. ‘ನಾವ್ಯಾಕೆ ಅದೇ ಮಾದರಿಯ ದಾಳಿಯನ್ನುಯೋಜಿಸಬೇಕು? ಅದಕ್ಕಿಂತ ಹೆಚ್ಚಿನದ್ದನ್ನು ನಾವ್ಯಾಕೆ ಮಾಡಬಾರದು? ಇದರ ನಿರೀಕ್ಷಯಲ್ಲೇ ನೀವಿರಿ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.
Click this button or press Ctrl+G to toggle between Kannada and English