- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ : ಪ್ರಧಾನಿ ಮೋದಿಯವರಿಂದ ಮಹತ್ವದ ಘೋಷಣೆಗಳ ನಿರೀಕ್ಷೆ

gandhi-150 [1]ನವದೆಹಲಿ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯ ಐತಿಹಾಸಿಕ ಸಂಭ್ರಮದಲ್ಲಿ ಭಾರತ ಹಲವಾರು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಮಹತ್ವದ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ.

ಇಂದು ಸಾಯಂಕಾಲ ಪ್ರಧಾನಿ ಮೋದಿ ಅವರು ಗುಜರಾತ್ ನಲ್ಲಿರುವ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಸಾಬರ್ ಮತಿ ನದಿ ದಂಡೆಯಲ್ಲಿ ಸುಮಾರು 20,000 ಗ್ರಾಮ ಮುಖಂಡರ ಸನ್ಮುಖದಲ್ಲಿ ಮೋದಿ ಅವರು ಭಾರತ ಬಹಿರ್ದೆಶೆ ಮುಕ್ತ ದೇಶವಾಗಿದೆ ಎಂಬ ಮಹತ್ವದ ಘೋಷಣೆಯನ್ನು ಮಾಡಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಗಾಂಧಿ ಸಂಸ್ಥೆಗಳ ಮುಖ್ಯಸ್ಥರು, ಹೈಕೋರ್ಟ್ ನ್ಯಾಯಾಧೀಶರು, ಪದ್ಮ ಪ್ರಶಸ್ತಿ ಪುರಸ್ಕೃತರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಗ್ರಾಮ ಮಟ್ಟದ ಪೌರ ಕಾರ್ಮಿಕರಿಗೆಲ್ಲಾ ಆಹ್ವಾನವನ್ನು ನೀಡಲಾಗಿದೆ.

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯ ಸಂಭ್ರಮಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಹಾಗೂ ಗುಜರಾತ್ ನ ವಿವಿಧ ಭಾಗಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ಒಮ್ಮೆಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಳಕೆಗೆ ಕೇಂದ್ರ ಸರಕಾರ ಸಂಪೂರ್ಣ ನಿಷೇಧ ಹೇರುವ ಘೋಷಣೆಯನ್ನು ಮಾಡುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಈ ಮೂಲಕ 2022ನೇ ಇಸವಿ ಒಳಗೆ ಭಾರತವನ್ನು ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ.

ಪ್ರಧಾನಿ ಮೋದಿ ಅವರು ಇಂದು ಬೆಳಿಗ್ಗೆ ರಾಜ್ ಘಾಟ್ ನಲ್ಲಿರುವ ರಾಷ್ಟ್ರಪಿತನ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ನಮನ ಸಲ್ಲಿಸಲಿದ್ದಾರೆ. ಬಳಿಕ ಮೋದಿ ಅವರು ವಿಜಯ್ ಘಾಟ್ ನಲ್ಲಿರುವ ಮಾಜೀ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಲಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಅಕ್ಟೋಬರ್ 2ರಂದೇ ಆಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ 115ನೇ ಜನ್ಮದಿನ ಇಂದು ಆಗಿದೆ.

ಆ ಬಳಿಕ ನರೇಂದ್ರ ಮೋದಿ ಅವರು ಸಂಸತ್ತಿಗೆ ತೆರಳಿ ಅಲ್ಲಿ ಈ ಇಬ್ಬರು ಮಹಾನ್ ನಾಯಕರಿಗೆ ಪುಷ್ಪನಮನವನ್ನು ಸಲ್ಲಿಸಲಿದ್ದಾರೆ. ಸಾಯಂಕಾಲ ಮೋದಿ ಅವರು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇದೆ.