ಹೆಬ್ರಿ : ತ್ಯಾಜ್ಯ ರಾಶಿ; ತಹಶೀಲ್ದಾರ್‌ ಅಂಗಡಿ ಮಾಲಕರಿಗೆ ಎಚ್ಚರಿಕೆ

10:03 AM, Friday, October 4th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

hebriಹೆಬ್ರಿ : ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಮೂರುರಸ್ತೆ ಸರ್ಕಲ್‌ ಬಳಿ ಇರುವ ಅನಧಿಕೃತ ಗೂಡಂಗಡಿಗಳಿಗೆ ಅ. 2ರಂದು ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ ಭೇಟಿ ನೀಡಿ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿದರು.

ಅನುಮತಿ ಪಡೆಯದೆ ಸರಕಾರಿ ಜಾಗದಲ್ಲಿ ಅಂಗಡಿಗಳನ್ನು ಮಾಡಿದ್ದಲ್ಲದೆ ಪಕ್ಕದ ಬೋಗಿ ಹಾಡಿಯಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಪರಿಸರ ಹಾನಿಯಾಗುತ್ತಿದೆ. ಮೀನಿನ ತ್ಯಾಜ್ಯ, ಬಾಟಲ್‌ಗ‌ಳು, ಪ್ಲಾಸ್ಟಿಕ್‌ ಬ್ಯಾಗ್‌ಗಳು, ತಿಂಡಿ-ತಿನಸಿನ ತ್ಯಾಜ್ಯಗಳ ರಾಶಿ ಸ್ಥಳೀಯ ಸಂಘಟನೆಗಳು ಸ್ವಚ್ಛತೆ ಕಾರ್ಯ ನಡೆಸುವಾಗ ಕಂಡುಬಂದಿವೆ. ಇದಕ್ಕೆಲ್ಲ ನೀವೇ ಕಾರಣ. ನಿಮ್ಮ ಅಂಗಡಿಗಳು ಇಲ್ಲಿ ಇರದಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಪಕ್ಕದಲ್ಲಿಯೇ ಹೈಸ್ಕೂಲ್‌, ಕಾಲೇಜು ಗಳಿದ್ದು ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದೆ ಎಂದರು. ಹೀಗೆ ಪರಿಸರದಲ್ಲಿ ತ್ಯಾಜ್ಯ ಎಸೆಯುತ್ತಿದ್ದರೆ ಅಂಗಡಿಗಳಳನ್ನು ನೆಲಸಮ ಮಾಡುವ ಜತೆಗೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಈ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಹಾಗೂ ಮದ್ಯ ಮಾರಲಾ ಗುತ್ತದೆ ಎಂಬ ಮಾಹಿತಿ ಬಂದಿವೆ. ಈ ಬಗ್ಗೆ ಪ್ರತಿ ಅಂಗಡಿಗಳ ತಪಾಸಣೆ ಮಾಡಲಾಗುವುದು. ಈ ವೇಳೆ ಮಾಹಿತಿ ಸತ್ಯವಾದಲ್ಲಿ ಕಠಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿ ಯವರನ್ನು ತಹಶೀಲ್ದಾರ್‌ ಅವರು ತರಾಟೆಗೆ ತೆಗೆದುಕೊಂಡರು.

ರಾತ್ರಿ ಹೊತ್ತು ಪರಿಸರದ ನಿವಾಸಿಗಳು ಹಾಗೂ ಹೊರಗಿನವರು ಇಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಈ ಬಗ್ಗೆ ಇಲ್ಲಿ ಸಿಸಿ ಕೆಮರಾ ಅಳವಡಿಸಿದಲ್ಲಿ ತಪ್ಪಿತಸ್ಥರನ್ನು ಹಿಡಿಯುವುದು ಸುಲಭ ಎಂದು ಸ್ಥಳೀಯ ಅಂಗಡಿಯವರು ತಹಶೀಲ್ದಾರ್‌ ಅವರ ಗಮನಕ್ಕೆ ತಂದರು.

ಪರಿಸರದಲ್ಲಿ ಸುಮಾರು 120 ಚೀಲಗಳಲ್ಲಿ ತ್ಯಾಜ್ಯ ದೊರೆತಿದ್ದು ಅದರಲ್ಲಿ ಸುಮಾರು 4 ಚೀಲ ಮದ್ಯದ ಬಾಟಲ್‌ಗ‌ಳಿದ್ದವು. ಈ ಬಗ್ಗೆ ಆಕ್ರೋಶಗೊಂಡ ತಹಶೀಲ್ದಾರ್‌ ಅವರು, ಸ್ವಚ್ಛ ಮಾಡುತ್ತಿದ್ದ ಸ್ಥಳಕ್ಕೆ ಸುತ್ತಮುತ್ತಲಿನ ಅಂಗಡಿಯವರನ್ನು ಕರೆಯಿಸಿ ಸ್ವಚ್ಛತೆಯ ಸಂಕಲ್ಪ ಬೋಧಿಸಿದರು. ಜತೆಗೆ ಇನ್ನು ಮುಂದೆ ಕಸಕಂಡರೆ ಈ ಭಾಗದ ಅಂಗಡಿಯವರೇ ಹೊಣೆ ಎಂದು ಎಚ್ಚರಿಕೆ ನೀಡಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English