ಕಾಂಗ್ರೆಸ್​ಗೆ ಸೋಲು ಕಟ್ಟಿಟ್ಟ ಬುತ್ತಿ : ಖರ್ಗೆ ವಿರುದ್ಧ ಸಂಜಯ್ ನಿರುಪಮ್ ಆಕ್ರೋಶ

11:14 AM, Saturday, October 5th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

nirupamಮುಂಬೈ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲು ಕಟ್ಟಿಟ್ಟ ಬುತ್ತಿ. ಮುಂಬೈ ಮಹಾನಗರದಲ್ಲಿ ಮೂರ್ನಾಲ್ಕು ಕ್ಷೇತ್ರದಲ್ಲಿ ಗೆದ್ದರೆ ಅದೇ ಹೆಚ್ಚು ಎಂದು ಪಕ್ಷದ ಹೈಕಮಾಂಡ್ ವಿರುದ್ಧ ಬಂಡಾಯ ಸಾರಿರುವ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ. ಅಭ್ಯರ್ಥಿಗಳ ಆಯ್ಕೆ ನೋಡಿದರೆ ಮುಂಬೈನಲ್ಲಿ ಮೂರ್ನಾಲ್ಕು ಕ್ಷೇತ್ರದಲ್ಲಷ್ಟೆ ಕಾಂಗ್ರೆಸ್ ಗೆಲ್ಲಬಹುದು. ಉಳಿದವರು ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋಲಲಿದ್ದಾರೆ. ರಾಹುಲ್ ಗಾಂಧಿಗೆ ಆಪ್ತರಾದವರನ್ನು ಪಕ್ಷದಿಂದ ಹೊರಹಾಕುವ ಪಿತೂರಿ ವ್ಯವಸ್ಥಿತವಾಗಿ ನಡೆಯುತ್ತಿದೆ. ದೆಹಲಿಯಲ್ಲಿ ಕುಳಿತವರಿಗೆ ಕ್ಷೇತ್ರದಲ್ಲಿನ ವಾಸ್ತವ ಗೊತ್ತಿಲ್ಲ. ವಿವೇಚನೆ ಇಲ್ಲದೆ ಕೈಗೊಂಡ ನಿರ್ಧಾರಗಳು ಖಂಡನೀಯ. ಹೀಗಾಗಿಯೇ ನಾನು ಪ್ರಚಾರ ಕಾರ್ಯದಲ್ಲಿ ತೊಡಗುವುದಿಲ್ಲ ಎಂದಿದ್ದಾರೆ.

ಮಹಾರಾಷ್ಟ್ರದ ಉಸ್ತುವಾರಿಯಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಟ್ಟು ಹೊರಹಾಕಿರುವ ಸಂಜಯ್ ನಿರುಪಮ್ ‘ಗೆಲ್ಲುವ ಸಾಮರ್ಥ್ಯವಿದ್ದ ನಾಲ್ವರ ಹೆಸರನ್ನು ಶಿಫಾರಸು ಮಾಡಿದ್ದೆ. ಆದರೆ, ಖರ್ಗೆ ಒಂದು ಬಾರಿಯೂ ಚರ್ಚೆ ಮಾಡದೆ ಟಿಕೆಟ್ ನಿರಾಕರಿಸಿದರು. ಮುಂಬೈ ಉತ್ತರ ಭಾಗ ಕಾಂಗ್ರೆಸ್ ಪ್ರಾಬಲ್ಯವಿರುವ ಪ್ರದೇಶ. ಇಲ್ಲಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸೌಜನ್ಯಕ್ಕಾದರೂ ನನ್ನನ್ನು ಒಂದು ಮಾತು ಕೇಳಲಿಲ್ಲ. ಈ ರೀತಿ ಉಪೇಕ್ಷೆ ಮಾಡಿದರೆ ಶೀಘ್ರದಲ್ಲೇ ಪಕ್ಷ ತೊರೆಯುವೆ’ ಎಂದಿದ್ದಾರೆ. ಮುಂಬೈ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ಸಂಜಯ್ ನಿರುಪಮ್ನ್ನು ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೂ ಕೆಲ ದಿನ ಮೊದಲು ಬದಲಾವಣೆ ಮಾಡಲಾಗಿತ್ತು. ಮೊದಲು ಶಿವಸೇನೆಯಲ್ಲಿದ್ದ ಸಂಜಯ್, ಒಂದೂವರೆ ದಶಕದ ಹಿಂದೆ ಕಾಂಗ್ರೆಸ್ಗೆ ಸೇರಿದ್ದರು.

ದಸರಾ ನಂತರ ರಾಹುಲ್ ಪ್ರಚಾರ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದಸರಾ ಹಬ್ಬದ ನಂತರ ಭಾಗವಹಿಸಲಿದ್ದಾರೆ. ಅ. 10ರಿಂದ 19ರವರೆಗೆ ಉಭಯ ರಾಜ್ಯಗಳಲ್ಲಿ ಪ್ರಚಾರ ಸಭೆ ಮತ್ತು ರೋಡ್ ಷೋಗಳಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದಾರೆ. ದಿನಾಂಕ ಮತ್ತು ಸ್ಥಳವನ್ನು ರಾಹುಲ್ರ ಕಚೇರಿ ಅಂತಿಮಗೊಳಿಸಲಿದೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗಪುರ ನೈಋತ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಸದರೂ ಆದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹಾಜರಿದ್ದರು. ನಾಮಪತ್ರ ಸಲ್ಲಿಕೆಗೂ ಮೊದಲು ಪತ್ನಿ ಅಮೃತಾ ಜತೆಗೆ ಗಡ್ಕರಿ ಮನೆಗೆ ಭೇಟಿ ನೀಡಿದ ಫಡ್ನವೀಸ್, ಆಶೀರ್ವಾದ ಪಡೆದರು. ನಂತರ ಗಡ್ಕರಿ ಜತೆಗೂಡಿ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೃಹತ್ ರೋಡ್ ಷೋ ನಡೆಸಿದರು. ರಾಜ್ಯದ ಜನರು ಅಭಿವೃದ್ಧಿ ಪರ ಇದ್ದಾರೆ. ಹೀಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಾಗಪುರ ಜಿಲ್ಲೆ ಎಲ್ಲ 12 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ನಿಸ್ಸಂಶಯವಾಗಿ ಗೆಲ್ಲುತ್ತಾರೆ ಎಂದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English