- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎರಡು ಆದೇಶಗಳಲ್ಲಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ : ಆರ್.ಅಶೋಕ್

R-Ashok [1]ಬೆಂಗಳೂರು : ರಾಜ್ಯದಲ್ಲಿ ನೆರೆಯಿಂದ ಆಗಿರುವ ಒಟ್ಟು ಅಂದಾಜು ಹಾನಿ 38,000 ಕೋಟಿ ರೂ. ಆದರೆ ಎನ್‍ಡಿಆರ್‍ಎಫ್ ನಿಯಮಾವಳಿ ಪ್ರಕಾರ ರಾಜ್ಯಕ್ಕೆ 3,810.80 ಕೋಟಿ ರೂ. ಬರಬೇಕು. ಅದರಲ್ಲಿ ಮೊದಲ ಕಂತು 1,200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಎರಡು ಪ್ರತ್ಯೇಕ ಆದೇಶಗಳಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಳುಹಿಸಿದ ಅಂದಾಜು ನಷ್ಟದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿಲ್ಲ, ಕೇವಲ ಸ್ಪಷ್ಟೀಕರಣ ಕೇಳಿದೆ. ಮನೆ ಕುಸಿತ ಪ್ರಕರಣಗಳಿಗೆ ಹತ್ತು ಸಾವಿರ ರೂ. ತಕ್ಷಣ ಪರಿಹಾರ ನೀಡಲಾಗುತ್ತಿದೆ. ಮನೆಗೆ ನೀರು ನುಗ್ಗಿರುವ ಪ್ರಕರಣಗಳಿಗೂ ತಕ್ಷಣ 10,000 ರೂ. ಪರಿಹಾರ ನೀಡಿರುವುದಕ್ಕೆ ಕೇಂದ್ರ ಸರ್ಕಾರ ಆಕ್ಷೇಪಿಸಿದೆ. ಆದರೆ ಮನೆಗೆ ನೀರು ನುಗ್ಗಿದಾಗಲೂ ಪರಿಹಾರ ನೀಡಬೇಕು ಎಂದು ಎನ್‍ಡಿಆರ್‍ಎಫ್ ನಿಯಾವಳಿಯಲ್ಲಿ ಸ್ಪಷ್ಟವಾಗಿದೆ ಎಂದು ವಿವರಿಸಿದರು.

ಇದನ್ನು ಮತ್ತೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಜತೆಗೆ ಮನೆ ದುರಸ್ಥಿಗೆ 25,000 ರೂ. ಗಳಿಂದ ಒಂದು ಲಕ್ಷ ರೂ. ವರೆಗೆ ಪರಿಹಾರ ಹಣ ಬಿಡುಗಡೆ ಮಾಡಿದ್ದೇವೆ. ನೆರೆ ಸಂತ್ರಸ್ತರಿಗೆ ಮೂಲ ಸೌಕರ್ಯ ಕಲ್ಪಿಸಲು 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಲೋಕೋಪಯೋಗಿ ಇಲಾಖೆಯ ರಸ್ತೆಗಳ ದುರಸ್ತಿಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರಸಕ್ತ 7 ನಿರಾಶ್ರಿತರ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಮೊದಲು 12 ಕೇಂದ್ರಗಳಿದ್ದವು ಎಂದು ಮಾಹಿತಿ ನೀಡಿದರು.

ರಾಜ್ಯದ 103 ತಾಲೂಕುಗಳು ನೆರೆ ಪೀಡಿತ ಎಂದು ಘೋಷಿಸಲಾಗಿದೆ. ಇದುವರೆಗೆ ರಾಜ್ಯ ಸರ್ಕಾರ 2,577.73 ಕೋಟಿ ರೂ. ಗಳನ್ನು ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನೆರೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮನೆ ನಿರ್ಮಿಸಲು 30-30 ಅಥವಾ 30-50 ಅಳತೆಯ ನಿವೇಶನಗಳನ್ನು ಸಂತ್ರಸ್ತರಿಗೆ ನೀಡುವಂತೆ ಆದೇಶಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ನಿವೇಶನ ಭೂಮಿ ಗುರುತಿಸಲಾಗಿದೆ. ಈಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಮನೆ ನಿರ್ಮಾಣ ಹಾಗೂ ಭೂ ಕುಸಿತಕ್ಕೆ ಪರ್ಯಾಯ ಭೂಮಿ ಒದಗಿಸಲು ಬಳಕೆ ಮಾಡಲಾಗುತ್ತದೆ. ಬೆಳೆ ಪರಿಹಾರಕ್ಕೂ ಕೇಂದ್ರದ ಹಣ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಹೊಳೆನರಸಿಪುರದ ಐಬಿಯಲ್ಲಿ ನಿನ್ನೆ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿದ್ದ ತಹಶೀಲ್ದಾರ್‍ಗಳಿಗೆ ನೋಟಿಸ್ ನೀಡಲಾಗಿದೆ. 24 ಗಂಟೆಗಳ ಒಳಗಾಗಿ ಜಿಲ್ಲಾಧಿಕಾರಿಗಳ ಮುಂದೆ ಹಾಜರಾಗಿ ಸ್ಪಷ್ಟೀಕರಣ ನೀಡಬೇಕು. ಇಲ್ಲವಾದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ಎಚ್ಚರಿಸಿದರು.