- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮುಂದಿನ ಮೂರು ದಿನಗಳ ಕಾಲ ಬೆಂಗಳೂರಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

rain [1]ಬೆಂಗಳೂರು : ಮುಂದಿನ ಮೂರು ದಿನಗಳ ಕಾಲ ಬೆಂಗಳೂರಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ಒಂದು ವಾರದಿಂದ ಸಂಜೆ ವೇಳೆ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದೊಂದು ವಾರದಿಂದ ಆಗಾಗ ಪ್ರತ್ಯಕ್ಷನಾಗಿ ಆರ್ಭಟಿಸುವ ಮಳೆರಾಯ ಇನ್ನೂ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವರ್ಷಧಾರೆ ಸುರಿಸಲಿದ್ದಾನೆ. ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಅಕ್ಟೋಬರ್ 12ರವರೆಗೂ ಮಳೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ನಗರದಲ್ಲಿ ಮಂಗಳವಾರವೂ ಮಳೆಯ ಆರ್ಭಟ ಮುಂದುವರೆದ ಪರಿಣಾಮ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಇದರಿಂದ ನವರಾತ್ರಿ ಉತ್ಸವ ಆಚರಣೆಗೂ ಅಡ್ಡಿಯಾಯಿತು. ಇದರ ನಡುವೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಅ. 9ರಿಂದ 12ರವರೆಗೆ ನಗರದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಿದೆ.

ಬೆಂಗಳೂರು ಕೇಂದ್ರ ಭಾಗದಲ್ಲಿ ಗರಿಷ್ಠ 30.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.3 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‌ನಲ್ಲಿ ಗರಿಷ್ಠ 29.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18.5 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 29.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ 18.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.