- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕನಿಷ್ಠ ಆರು ದಿನ ಅಧಿವೇಶನ ವಿಸ್ತರಿಸಲು ಸಿದ್ದರಾಮಯ್ಯ ಒತ್ತಾಯ

siddaramaiah [1]ಬೆಂಗಳೂರು : ವಿಧಾನಸಭೆ ಕಲಾಪವನ್ನು ಇನ್ನೂ ಆರು ದಿನ ವಿಸ್ತರಿಸಬೇಕು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಚಳಿಗಾಲದ ಅಧಿವೇಶನವನ್ನು ಕೇವಲ ಮೂರು ದಿನ ಮಾತ್ರ ನಡೆಸಲು ಉದ್ದೇಶಿಸಲಾಗಿತ್ತು.

ಆದರೆ ಮೂರು ದಿನ ನೆರೆ ಹಾಗೂ ಕನಿಷ್ಠ ಮೂರು ದಿನ ಬಜೆಟ್ ಕುರಿತು ಚರ್ಚೆ ನಡೆಯಬೇಕಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಇವೆಲ್ಲವೂ ಚರ್ಚೆಯಾಗುತ್ತಿತ್ತು, ನೀವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿಲ್ಲ ಯಡಿಯೂರಪ್ಪನವರೇ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೀರ, ನಿಮಗೆಲ್ಲಾ ತಿಳಿದಿದೆ ಪಲಾಯನವಾದ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆಯಿದ್ದ ಕಾರಣ ಕೇಬಲ ಮೂರು ದಿನದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ಅಧಿವೇಶನವನ್ನು ವಿಸ್ತರಿಸಲು ಅವಕಾಶ ಇದ್ದಾಗ್ಯೂ ರಾಜ್ಯ ಬಿಜೆಪಿ ಸರ್ಕಾರ ಕೇವಲ ಮೂರೇ ದಿನದಲ್ಲಿ ಅಧಿವೇಶನ ಮುಗಿಸಲು ಮುಂದಾಗಿದೆ. ಈ ಮೂರು ದಿನದಲ್ಲೇ ನೆರೆ ಪರಿಹಾರ, ಬಜೆಟ್ ಮಂಡನೆ ಹಾಗೂ ಬಜೆಟ್ ಮೇಲಿನ ಚರ್ಚೆ ನಡೆಯಬೇಕಿರುವ ಪರಿಸ್ಥಿತಿ ಉಂಟಾಗಿದೆ.

ಎರಡನೇ ದಿನದ ಅಧಿವೇಶನದ ಭಾಷಣದಲ್ಲಿ ತಮ್ಮ ಆಕ್ರೋಶ ಹೊರಹಾಕಿರುವ ಅವರು ಪ್ರವಾಹದ ಪರಿಸ್ಥಿತಿ ಗಂಭೀರವಾದ ವಿಚಾರ. ಅರ್ಧ ರಾಜ್ಯವೇ ಪ್ರವಾಹಕ್ಕೆ ತುತ್ತಾಗಿದೆ. ಆ ಭಾಗದ ಶಾಸಕರು ಸದನಲ್ಲಿ ಅಭಿಪ್ರಾಯ ತಿಳಿಸಬೇಕು.

ಹೀಗಾಗಿ ಸದನ ವಿಸ್ತರಣೆ ಮಾಡಿ. ಅದನ್ನು ಬಿಟ್ಟು ಇಂದೇ 1 ಗಂಟೆಯ ಒಳಗಾಗಿ ಈ ಕುರಿತ ಚರ್ಚೆಯನ್ನು ಮುಗಿಸಬೇಕು ಎಂಬುದು ಸರಿಯಲ್ಲ. ಇದೊಂದು ಜನ ವಿರೋಧಿ ನಿಲುವು ಎಂದು ಕಿಡಿಕಾರಿದ್ದಾರೆ.

ಪ್ರವಾಹ ಮತ್ತು ಬಜೆಟ್ ಕುರಿತು ತಲಾ 3 ದಿನ ಚರ್ಚೆಯಾಗಬೇಕು. ವಿಪಕ್ಷ ಬೇಡ ಅಂದರೆ ನಿಮಗೆ ಬೇಕಾದಂತೆ ಮಾಡಿಕೊಳ್ಳಿ. ಆದರೆ, ಇಂತಹ ಸರ್ವಾಧಿಕಾರಿ ಧೋರಣೆ ಮಾತ್ರ ಸರಿಯಲ್ಲ. ಇದು ನಮ್ಮ ಪಕ್ಷದ ಸ್ಪಷ್ಟವಾದ ನಿಲುವು ಎಂದು ಅವರು ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ನಾನು 13 ಬಜೆಟ್ ಮಂಡಿಸಿದ್ದೇನೆ, ಬಜೆಟ್ ಮೇಲೆ ಹೆಚ್ಚಿನ ಚರ್ಚೆಯಾಗಬೇಕು. 30 ರವರೆಗೆ ಬಜೆಟ್ ಪಾಸು ಮಾಡಿಕೊಳ್ಳಬಹುದು, ಸಪ್ಲಿಮೆಂಟರಿ ಬಜೆಟ್ ಬೇಕಾದರೆ ಪಾಸ್ ಮಾಡೋಣ. ಆದರೆ, ಬಜೆಟ್ ಮಂಡಿಸೋಕೆ ತರಾತುರಿಯೇಕೆ? ಜನರ ಕಷ್ಟಗಳಿಗೆ ಸರ್ಕಾರ ಸ್ಪಂದಿಸದೆ ಇರುವುದು ಸರಿಯಾದ ತೀರ್ಮಾನವಲ್ಲ ಎಂದಿದ್ದಾರೆ.