- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೈಸೂರು ವಿಭಜನೆ ಆಗಬೇಕು : ಅನರ್ಹ ಶಾಸಕ ಹೆಚ್ ವಿಶ್ವನಾಥ್

vishwanath [1]ಮೈಸೂರು : ಬಳ್ಳಾರಿ ವಿಭಜನೆಯ ಸುದ್ದಿ ಗದ್ದಲ ಎಬ್ಬಿಸಿರೋ ಬೆನ್ನಲ್ಲೇ ಇದೀಗ ಮೈಸೂರು ವಿಭಜನೆ ಆಗಬೇಕು ಎಂಬ ಕೂಗು ಕೇಳಿ ಬಂದಿದೆ.

ಹೌದು. ಮೈಸೂರನ್ನು ಇಬ್ಭಾಗ ಮಾಡಬೇಕೆಂದು ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಆಗ್ರಹಿದ್ದಾರೆ. ಅಲ್ಲದೆ ಪ್ರತ್ಯೇಕ ಜಿಲ್ಲೆಗೆ ಒಂದು ಹೋರಾಟ ಸಮಿತಿ ರಚಿಸಿ ಹೋರಾಟ ಮಾಡುತ್ತೇವೆ ಎಂದು ಕೂಡ ಹೇಳಿದ್ದಾರೆ.

ಹುಣಸೂರು ತಾಲೂಕನ್ನು ಜಿಲ್ಲೆಯಾಗಿ ಘೋಷಿಸಬೇಕು. ಹೊಸ ಜಿಲ್ಲೆಗೆ ಡಿ.ದೇವರಾಜ ಅರಸ್ ಜಿಲ್ಲೆ ಹೆಸರಿಡಬೇಕು. ಹೊಸ ಜಿಲ್ಲೆ ವ್ಯಾಪ್ತಿಗೆ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಜೊತೆ ಹೊಸ ತಾಲೂಕು ಸರಗೂರು ಹಾಗೂ ಸಾಲಿಗ್ರಾಮ ಸೇರಿಸಿ ಒಂದು ಜಿಲ್ಲೆ ಮಾಡಬೇಕು ಎಂಬ ಪ್ರಸ್ತಾವನೆಯನ್ನ ಸರ್ಕಾರದ ಮುಂದೆ ಇಟ್ಟಿದ್ದಾರೆ.

ಈ ಹಿಂದೆ ಅಖಂಡ ಬಳ್ಳಾರಿ ಜಿಲ್ಲೆ ಉಳಿಯಬೇಕೆಂದು ಶಾಸಕ ಸೋಮಶೇಖರ್ ರೆಡ್ಡಿ, ಕುರಣಾಕರರೆಡ್ಡಿ, ಸಚಿವ ಶ್ರೀರಾಮುಲು ಪಟ್ಟು ಹಿಡಿದಿದ್ದರು. ಇನ್ನೊಂದೆಡೆ ಅನರ್ಹ ಶಾಸಕ ಆನಂದಸಿಂಗ್, ಕೆಸಿ ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಅವರು ವಿಜಯನಗರ ಜಿಲ್ಲೆಯ ರಚನೆ ಆಗಲೇಬೇಕೆಂದು ಸಿಎಂ ಬಿಎಸ್ ವೈ ಮೇಲೆ ಒತ್ತಡ ಹೇರಿದ್ದರು.

ವಿಜಯನಗರ ಜಿಲ್ಲಾ ರಚನೆಗೆ ಬೇಡಿಕೆ ಜೋರಾಗುತ್ತಿದ್ದ ಬೆನ್ನಲ್ಲೇ ಅಖಂಡ ಬಳ್ಳಾರಿ ಜಿಲ್ಲೆಗೆ ಆಗ್ರಹಿಸಿ ಹೋರಾಟಗಳು ಸಹ ತೀವ್ರಗೊಂಡಿತ್ತು. ಈ ಮಧ್ಯೆ ಬಳ್ಳಾರಿ ಜಿಲ್ಲೆಯಿಂದ 6 ತಾಲೂಕುಗಳನ್ನು ಬೇರ್ಪಡಿಸಿ ರಾಜ್ಯ ಸರ್ಕಾರವು ಜಿಲ್ಲೆ ವಿಭಜಿಸಿ ಮ್ಯಾಪ್ ಸಿದ್ಧಪಡಿಸಿದೆ.

ಭೌಗೋಳಿಕವಾಗಿ ಜಿಲ್ಲೆ ಬೇರ್ಪಡಿಸಿ ಮ್ಯಾಪ್ ಸಿದ್ಧಪಡಿಸಲಾಗಿದ್ದು, ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟರು, ಹರಪನಹಳ್ಳಿ ಸೇರ್ಪಡೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಬಳ್ಳಾರಿ, ಸಿರಗುಪ್ಪ, ಕೂಡ್ಲಿಗಿ, ಸಂಡೂರು, ಕುರಗೋಡ್ ತಾಲೂಕುಗಳು ಉಳಿಯಲಿವೆ. ಜಿಲ್ಲೆ ವಿಭಜನೆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡಿರುವ ಸರ್ಕಾರ ಜಿಲ್ಲೆಯನ್ನು ಬೇರ್ಪಡಿಸಿ ಮ್ಯಾಪ್ ಸಿದ್ಧತೆ ಮಾಡಿದೆ ಎಂದು ಹೇಳಲಾಗಿದೆ.