ಮಹಾರಾಷ್ಟ್ರ : ಸಂವಿಧಾನದ 370ನೇ ವಿಧಿ ರದ್ದು ಮಾಡಿರುವುದಕ್ಕೂ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳನ್ನು (ಎನ್ಸಿಪಿ) ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಕೇಳಲು ಅವುಗಳಿಗೆ ನಾಚಿಕೆಯಾಗುವು ದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ನಾಯಕರನ್ನು ಮತ್ತು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ರನ್ನು ಹಿಗ್ಗಾಮುಗ್ಗಾ ಟೀಕಿಸಿದರು. ಜಮ್ಮು ಮತ್ತು ಕಾಶ್ಮೀರಕ್ಕಾಗಿ ತ್ಯಾಗ ಮಾಡಿದ ಮಹಾರಾಷ್ಟ್ರದ ಮಕ್ಕಳ ಬಗ್ಗೆ ನಮಗೆ ಹೆಮ್ಮೆಯಿದೆ. ಇಂದು ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷದ ನಾಯಕರು 370ನೇ ವಿಧಿ ರದ್ದತಿಗೂ ಮಹಾರಾಷ್ಟ್ರಕ್ಕೂ ಏನು ಸಂಬಂಧ ಎಂದು ಕೇಳುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ತಿವಿದರು. ಚುನಾವಣೆ ನಡೆಯುತ್ತಿರುವ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಸರ್ಕಾರಗಳ ವೈಫಲ್ಯದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ 370ನೇ ವಿಧಿ ರದ್ದತಿ ವಿಚಾರವನ್ನೇ ಡಂಗುರ ಸಾರುತ್ತಿದೆೆ ಎಂದು ಕಾಂಗ್ರೆಸ್ ಮತ್ತು ಎನ್ಸಿಪಿ ಟೀಕಿಸಿದ್ದವು.
ವೀರ ಸಾವರ್ಕರ್ಗೆ ಭಾರತ ರತ್ನ ಪ್ರಶಸ್ತಿ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಆಗ್ರಹಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವವರಿಗೂ ಮೋದಿ ತಿರುಗೇಟು ನೀಡಿದರು. ‘ಬಿ.ಆರ್. ಅಂಬೇಡ್ಕರ್ಗೆ ಭಾರತ ರತ್ನ ನಿರಾಕರಿಸಿದವರೇ ಈಗ ಸಾವರ್ಕರ್ ವಿಚಾರದಲ್ಲೂ ಅದನ್ನೇ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ಅನ್ನು ಪರೋಕ್ಷವಾಗಿ ಟೀಕಿಸಿದರು.
ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ ಜಿಲ್ಲೆಯ ವಿವಿಧ ಕಡೆ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬುಧವಾರ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಗುಣಗಾನ ಮಾಡಿದ ಅವರು, ಬಿಜೆಪಿ ಸರ್ಕಾರದ ಅನಿವಾರ್ಯತೆಯನ್ನು ಹೇಳಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಸಾಂಗ್ಲಿ, ಅಕ್ಕಲಕೋಟದಲ್ಲಿ ನಡೆಯುವ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಚುನಾವಣೆ ಆಖಾಡಕ್ಕೆ ಇದೇ ಮೊದಲ ಬಾರಿಗೆ ಧುಮುಕಿರುವ ಶಿವಸೇನೆ ಸಂಸ್ಥಾಪಕ ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆಗೆ ದೊಡ್ಡ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದು ಬಾಲಿವುಡ್ ನಟ ಸಂಜಯ್ ದತ್ ಹೇಳಿದ್ದಾರೆ. ದೇಶಕ್ಕೆ ಕ್ರಿಯಾಶೀಲ ಯುವ ನಾಯಕರು ಬೇಕಾಗಿದ್ದಾರೆ. ಆದಿತ್ಯ ಭಾರಿ ಮತಗಳ ಅಂತರದಿಂದ ಗೆಲ್ಲಲೆನ್ನುವುದು ನನ್ನ ಅಭಿಲಾಷೆ’ ಎಂದು ದತ್ ವಿಡಿಯೊ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದ ಲಾತೂರ್ನ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಮೇಕ್ ಇನ್ ಇಂಡಿಯಾ’ ಯೋಜನೆಯ ವೈಫಲ್ಯದ ಬಗ್ಗೆ ಹೇಳಿದ್ದ ಮಾತುಗಳು ನೆಟ್ಟಿಗರ ವ್ಯಂಗ್ಯಕ್ಕೆ ಗುರಿಯಾಗಿ ವೈರಲ್ ಆಗಿದೆ. ‘ಮೇಕ್ ಇನ್ ಇಂಡಿಯಾ ಖತಂ. ಬೈ-ಬೈ, ಟಾಟಾ, ಗುಡ್ ಬೈ, ಗಯಾ’ ಎಂದು ವ್ಯಂಗ್ಯವಾಡಿದ್ದರು. ಈ ಸಾಲು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಪಡೋಲಿ ನೈಗಾಂವ್ನಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಶಿವಸೇನೆ ಸಂಸದ ಓಂರಾಜೆ ನಿಂಬಾಳ್ಕರ್ಗೆ ಯುವಕನೊಬ್ಬ ಚೂರಿಯಿಂದ ಹಲ್ಲೆ ಮಾಡಿದ್ದಾನೆ. ನಿಂಬಾಳ್ಕರ್ರ ಕೈಕುಲುಕಲೆಂದು ಬಂದ ವ್ಯಕ್ತಿ, ಹಠಾತ್ತನೆ ಚಾಕುವಿನಿಂದ ಇರಿದು ಪರಾರಿಯಾದ. ಇರಿತದಿಂದ ನಿಂಬಾಳ್ಕರ್ ಅಂಗೈಗೆ ಗಾಯವಾಗಿದೆ. ಕೈಗಡಿಯಾರ ಇದ್ದಿದ್ದರಿಂದ ಗಂಭೀರ ಗಾಯ ವಾಗುವುದು ತಪ್ಪಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಹರಿಯಾಣ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಶೋಕ್ ತನ್ವಾರ್ ದುಷ್ಯಂತ ಚೌತಾಲಾ ನೇತೃತ್ವದ ಜನನಾಯಕ್ ಜನತಾ ಪಾರ್ಟಿಗೆ (ಜೆಜೆಪಿ) ಬೆಂಬಲ ಘೋಷಿಸಿದ್ದಾರೆ. ಇದು ಮಾಜಿ ಪಕ್ಷದ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ಎಂದು ಅಶೋಕ್ ವರ್ಣಿಸಿದ್ದಾರೆ. ರಾಜ್ಯ ಅಸೆಂಬ್ಲಿ ಚುನಾವಣೆಗೆ ಕೆಲವೇ ದಿನ ಬಾಕಿಯಿರುವಾಗ ಅಶೋಕ್ರ ಈ ನಡೆ ಕಾಂಗ್ರೆಸ್ಗೆ ದೊಡ್ಡ ಹಿನ್ನಡೆಯಾಗಿದೆ.
Click this button or press Ctrl+G to toggle between Kannada and English