ಬೆಂಗಳೂರು : ಡಾ. ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್ ಅಂಗೂರ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ ವಾಕಿಂಗ್ ಹೋಗಿದ್ದ ವೇಳೆ ಅಯ್ಯಪ್ಪ ದೊರೆಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.
ಡಾ. ಅಯ್ಯಪ್ಪ ದೊರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಆರ್. ಟಿ. ನಗರ ಪೊಲೀಸರು ಸುಧೀರ್ ಅಂಗೂರ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲಯನ್ಸ್ ವಿಶ್ವವಿದ್ಯಾಲಯದ ವಿವಾದದ ಹಿನ್ನಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಸುಪಾರಿ ನೀಡಿ ಅಯ್ಯಪ್ಪ ದೊರೆ ಹತ್ಯೆ ಮಾಡಿಸಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲಯನ್ಸ್ ವಿಶ್ವವಿದ್ಯಾಲಯದ ಚಟುವಟಿಕೆಗಳಿಂದ ದೂರವಾಗಿದ್ದ ಡಾ. ಅಯ್ಯಪ್ಪ ದೊರೆ ರಿಯಲ್ ಎಸ್ಟೇಟ್, ರಾಜಕೀಯ, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.
ಡಾ. ಅಯ್ಯಪ್ಪ ದೊರೆ ಪತ್ನಿ ಪಾವನಾ ಸಹ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ವಿವಿ ಆಡಳಿತದ ಬಗ್ಗೆ ಹಲವಾರು ದೂರುಗಳು ಕೇಳ ಬಂದ ಹಿನ್ನಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ.
ಅಲಯನ್ಸ್ ವಿವಿ ಮಾಲೀಕತ್ವದ ಕುರಿತು ಸುಧೀರ್ ಅಂಗೂರ್ ಮತ್ತು ಮಧುಕರ್ ಅಂಗೂರ್ ನಡುವೆ ವ್ಯಾಜ್ಯ ನಡೆಯುತ್ತಿದೆ. ವಿದೇಶದಲ್ಲಿದ್ದ ಮಧುಕರ್ ಸೂಚನೆ ಮೇರೆಗೆ ಸುಧೀರ್ ಅಂಗೂರ್ ಡಾ. ಅಯ್ಯಪ್ಪ ದೊರೆ ಜೊತೆ ಸೇರಿ ಅಲಯನ್ಸ್ ವಿವಿ ಸ್ಥಾಪನೆ ಮಾಡಿದ್ದರು.
ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ ಮಧುಕರ್ ಅಂಗೂರ್ ವಿವಿ ಮಾಲೀಕತ್ವದ ಬಗ್ಗೆ ಸುಧೀರ್ ಅಂಗೂರ್ ಜೊತೆ ವಾಗ್ವಾದ ನಡೆಸಿದ್ದರು. ಡಾ. ಅಯ್ಯಪ್ಪ ದೊರೆ ಇಬ್ಬರ ನಡುವೆ ಸಂಧಾನ ಮಾಡಿಸಲು ಮುಂದಾಗಿದ್ದರು.
ಹಳೇ ದ್ವೇಷದ ಹಿನ್ನಲೆಯಲ್ಲಿ ಸುಧೀರ್ ಅಂಗೂರ್ ಡಾ. ಅಯ್ಯಪ್ಪರನ್ನು ಹತ್ಯೆ ಮಾಡಿಸಿದ್ದಾರೆ ಎಂದು ಶಂಕಿಸಲಾಗಿದೆ. ಆರ್. ಟಿ. ನಗರ ಪೊಲೀಸರು ಕೊಲೆ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.
Click this button or press Ctrl+G to toggle between Kannada and English