ಚೇರಂಬಾಣೆಯ ಬೆಂಗ್‌ನಾಡ್ ಕೊಡವ ಸಮಾಜದಲ್ಲಿ ’ಕೊಡಗ್‌ರ ಸಿಪಾಯಿ’ ಯಶಸ್ವೀ ಪ್ರದರ್ಶನ

9:24 PM, Tuesday, October 22nd, 2019
Share
1 Star2 Stars3 Stars4 Stars5 Stars
(No Ratings Yet)
Loading...

Kodagar-siphaiಮಡಿಕೇರಿ  :  ಕೊಟ್ಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಾಣ ಮತ್ತು ನಿರ್ದೇಶನದ ’ಕೊಡಗ್‌ರ ಸಿಪಾಯಿ’ ಕೊಡವ ಚಲನಚಿತ್ರದ 15ನೇ ದಿನದ ಪ್ರದರ್ಶನ ಚೇರಂಬಾಣೆಯ ಬೆಂಗ್‌ನಾಡ್ ಕೊಡವ ಸಮಾಜದಲ್ಲಿ ನಡೆಯಿತು.

ಈ ಸಂದರ್ಭ ಪ್ರಾಸ್ತವಿಕವಾಗಿ ಮಾತನಾಡಿದ, ನಟ ಹಾಗೂ ನಿರ್ಮಾಣ ನಿರ್ವಹಣೆ ಮಾಡಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಇದೊಂದು ಕಲಾತ್ಮಕ ಚಿತ್ರವಾಗಿದ್ದು, ಒಂದೇ ಚಿತ್ರದಲ್ಲಿ ಹಲವಾರು ಸಂದೇಶಗಳನ್ನು ನೀಡಲಾಗಿದೆ ಎಂದರು. ಪ್ರೀತಿ, ಪ್ರೇಮ ಪ್ರಸಂಗ ಹಾಗೂ ಹಾಡುಗಳಿಗೆ ಹೆಚ್ಚು ಒತ್ತು ನೀಡದೆ ಜನರಿಗೆ ಹಾಗೂ ಇಂದಿನ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಿರುವ ಚಿತ್ರ ಇದಾಗಿದ್ದು, ಹೆಚ್ಚು ಜನ ಮನ್ನಣೆ ಪಡೆದಿದೆ. ಇಂತಹ ಚಿತ್ರವನ್ನು ಕೊಡುಗೆಯಾಗಿ ನೀಡಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ಶ್ರಮವನ್ನು ಶ್ಲಾಘಿಸಿದರು. ಕಲಾತ್ಮಕ ಚಿತ್ರಗಳ ಮೂಲಕವೇ ಗಮನ ಸೆಳೆದಿರುವ ಇವರು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ಮಿಸಿರುವುದಲ್ಲದೆ ಸ್ಥಳೀಯ ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಕಥೆಗಳನ್ನು ತಮ್ಮ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಅಲ್ಲದೆ ಇಲ್ಲಿಯವರೆಗಿನ ಕೊಡಗಿನ ಇತಿಹಾಸದಲ್ಲಿ ಎರಡು ಸಿನಿಮಾಗಳನ್ನು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕೊಂಡೊಯ್ದ ಹೆಗ್ಗಳಿಕೆ ಇವರದ್ದಾಗಿದೆ.

ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೊಡಗ್‌ರ ಸಿಪಾಯಿ ಕೊಡವ ಸಿನಿಮಾವನ್ನು ಕೂಡ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕೊಂಡೊಯ್ಯುವ ಇವರ ಕನಸು ನನಸಾಗಲಿ ಎಂದು ಅಯ್ಯಪ್ಪ ಹಾರೈಸಿದರು.

ನಂತರ ಮಾತನಾಡಿದ ನಿರ್ದೇಶಕ, ನಿರ್ಮಾಪಕ, ನಟ ಕೊಟ್ಟುಕತ್ತಿರ ಪ್ರಕಾಶ್, ಕೊಡಗ್‌ರ ಸಿಪಾಯಿ ಚಲನಚಿತ್ರ ಬಿಡುಗಡೆ ಗೊಂಡು 15 ದಿನಗಳ ಪ್ರದರ್ಶನದ ನಂತರ ಉತ್ತಮ ಜನ ಮನ್ನಣೆಯನ್ನು ಪಡೆದಿದ್ದು, ಜನರ ಪ್ರೋತ್ಸಾಹದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಚಲನ ಚಿತ್ರವನ್ನು ನಿರ್ಮಿಸಲು ಉತ್ತೇಜಿಸಿದಂತಾಗಿದೆ ಎಂದು ಅವರು ನಾನು ಸಹ ಚೇರಂಬಾಣೆ ಗ್ರಾಮಕ್ಕೆ ಸೇರಿದವನು ಎಂದರು. ಡಿಜಿಟಲ್ ಯುಗದ ಸಿನಿಮಾಗಳ ಪೈಪೋಟಿಯ ನಡುವೆಯೂ ಕೊಡಗ್‌ರ ಸಿಪಾಯಿಯನ್ನು ಎಲ್‌ಇಡಿ ತಂತ್ರಜ್ಞಾನದ ಮೂಲಕ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಮುಂದೆಯೂ ಕೊಡವ ಚಿತ್ರಗಳನ್ನು ನಿರ್ಮಿಸುವವರು ಇದೇ ಪ್ರಕಾರವಾಗಿ ಯಶಸ್ವೀ ಪ್ರದರ್ಶನವನ್ನು ನೀಡಬಹುದಾಗಿದೆ ಎಂದರು.

Kodagar-siphaiಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೊಡವ ಸಿನಿಮಾ ಪ್ರದರ್ಶನಕ್ಕೆ ನೀಡಿದ ಸಹಕಾರವನ್ನು ಇದೇ ಸಂದರ್ಭ ಅವರು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೇಂಗ್ ನಾಡ್ ಕೊಡವ ಸಮಾಜದ ಅಧ್ಯಕ್ಷರಾದ ಕುಟ್ಟೇಟಿರ ಮಣಿ ಕುಂಙಪ್ಪ ಮಾತನಾಡಿ, ನಮ್ಮ ಗ್ರಾಮದವರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಸಾಹಿತ್ಯ ಹಾಗೂ ಕೊಡವ ಚಲನ ಚಿತ್ರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವುದಲ್ಲದೆ ಕನ್ನಡ ಚಿತ್ರರಂಗದಲ್ಲೂ ಗಮನ ಸೆಳೆದಿದ್ದಾರೆ. ಕೊಡವ ಸಮಾಜದ ಕಟ್ಟಡಕ್ಕೆ ಹಣ ಸಹಾಯ ಮಾಡಿರುವುದನ್ನು ನೆನಪಿಸಿಕೊಂಡು ಇವರನ್ನು ಇಂದಿನ ದಿನ ಕೊಡವ ಸಮಾಜದ ವತಿಯಿಂದ ಸನ್ಮಾನಿಸಬೇಕಿತ್ತು. ಆದರೆ ತುರ್ತಗಿ ನಡೆದ ಕಾರ್ಯಕ್ರಮದಿಂದಾಗಿ ಇಂದಿನ ದಿನ ಅವರನ್ನು ಸನ್ಮಾನಿಸಲಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಇಂತಹ ಸಿನಿಮಾ ಹಾಗೂ ಕೊಡವ ಕಾರ್ಯಕ್ರಮಗಳಿಗೆ ನಮ್ಮ ಸಮಾಜದ ಸಹಕಾರವು ಮುಂದಿನ ದಿನಗಳಲ್ಲಿಯೂ ಇರುತ್ತದೆ ಎಂದು ತಿಳಿಸಿದರು.

ಈಗಾಗಲೇ ಕೊಡಗ್‌ರ ಸಿಪಾಯಿ ಚಲನ ಚಿತ್ರ ಸೆ. 24 ಮತ್ತು 27 ರಂದು ವಿರಾಜಪೇಟೆ, ಸೆ. 30 ಮತ್ತು ಅ. 3 ರಂದು ನಾಪೋಕ್ಲು, ಅ. 9 ಮತ್ತು 10 ರಂದು ಪೊನ್ನಂಪೇಟೆ, ಅ. 14 ಮತ್ತು 16 ರಂದು ಮಡಿಕೇರಿ ಹಾಗೂ ಅ. 20 ರಂದು ಬಿರುನಾಣಿ, ಅ. 22 ರಂದು ಚೇರಂಬಾಣೆಯಲ್ಲಿ ಚಿತ್ರ ಪ್ರದರ್ಶನ ಕಂಡು ಜನ ಮನ್ನಣೆ ಪಡೆದಿದ್ದು, ಅ. 23 ರಂದು ಅರಮೇರಿ ಎಸ್.ಎಮ್.ಎಸ್. ಶಾಲೆ, ಅ. 24 ರಂದು ಬಾಳೆಲೆ, ಅ. 26 ಮತ್ತು 27 ರಂದು ಮೈಸೂರು, ನ. 1 ರಂದು ಟಿ. ಶೆಟ್ಟಿಗೇರಿ ಹಾಗೂ ನ. 4 ಮತ್ತು 6 ರಂದು ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಬೆಂಗ್‌ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಅಯ್ಯಂಡ ಸತೀಶ್, ಕಾರ್ಯದರ್ಶಿ ಬಾಚರಣಿಯಂಡ ದಿನೇಶ್ ಗಣಪತಿ, ಬೆಂಗ್‌ನಾಡ್ ಕೊಡವ ಸಮಾಜದ ಕ್ಲಬ್‌ನ ಅಧ್ಯಕ್ಷ ಪಟ್ಟಮಾಡ ಕುಶ, ಚಲನಚಿತ್ರ ವಿತರಕ ಬಾಳೆಯಡ ಪ್ರತೀಶ್ ಪೂವಯ್ಯ, ಅಚ್ಚೆಯಂಡ ಗಗನ್ ಗಣಪತಿ, ಸಮಾಜ ಸೇವಕರಾದ ತೇಲಪಂಡ ಶಂಭು ಅಪ್ಪಯ್ಯ ಹಾಜರಿದ್ದರು. ಸಾಬು ಪೆಮ್ಮಯ್ಯ ಪ್ರಾರ್ಥಿಸಿ, ಬೊಳ್ಳಜಿರ ಬಿ.ಅಯ್ಯಪ್ಪ ಸ್ವಾಗತಿಸಿ, ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English