- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಐವತ್ತೆರಡನೆ ವರ್ಧಂತ್ಯುತ್ಸವ

Pattabhisheka [1]ಧರ್ಮಸ್ಥಳದ : ನ್ಯಾಯವೇ ನನ್ನ ತಂದೆ, ಸತ್ಯವೇ ನನ್ನ ತಾಯಿ ಎಂಬ ಭಾವನೆಯೊಂದಿಗೆ ತಾನು ನ್ಯಾಯ ಮತ್ತು ಸತ್ಯದ ನೆಲೆಯಲ್ಲಿ ಕೆಲಸ ಮಾಡುತ್ತೇನೆ ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಐವತ್ತೆರಡನೆ ವರ್ಧಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ದೇಶದಲ್ಲಿ ಅನೇಕ ಮಂದಿ ಆಚಾರ್ಯರಿದ್ದಾರೆ ಆದರೆ ಆಚಾರವಿಲ್ಲ. ದೇಶಕ್ಕೆ ದೊಡ್ಡ ಚರಿತ್ರೆ ಇದೆ, ಆದರೆ ಚಾರತ್ರ್ಯವಿಲ್ಲ. ಅಲ್ಲಲ್ಲಿ ಸಂಘರ್ಷವಿದೆ ಆದರೆ ಸಮನ್ವಯ ಇಲ್ಲ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಯಾವುದೇ ಸೈನ್ಯ ಬಲದಿಂದ ಅಥವಾ ಇತರ ಶಕ್ತಿಗಳಿಂದ ಜಗತ್ತು ನಡೆಯುವುದಿಲ್ಲ. ಬಸವಣ್ಣ, ಗೌತಮ ಬುದ್ಧ, ಯೇಸುಕ್ರಿಸ್ತ, ಮಹ್ಮದ್ ಪೈಗಂಬರ, ಭಗವಾನ್ ಮಹಾವೀರನಂತಹ ವ್ಯಕ್ತಿಗಳಿಂದ ಸಾಮಾಜಿಕ ಪರಿವರ್ತನೆಯೊಂದಿಗೆ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ.

ಏಕಾಗ್ರತೆಯಿಂದ ಸಾಧನೆ ಮಾಡುವ ವ್ಯಕ್ತಿಯ ಶಕ್ತಿಯಿಂದ ಮಾತ್ರ ಕ್ರಾಂತಿಕಾರಿ ಪರಿವರ್ತನೆಯಾಗುತ್ತದೆ. ಹೆಗ್ಗಡೆಯವರು ಅಂತಹ ಸಾಧಕ ಸಂತ ಯುಗಪುರುಷ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರನ್ನೂ ತನ್ನ ಕುಟುಂಬದ ಸದಸ್ಯರಂತೆ ಪ್ರೀತಿ ವಿಶ್ವಾಸದಿಂದ ಅವರು ಕಾಣುತ್ತಾರೆ ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಸೇವೆಯ ಮೂಲಕ ಹೆಗ್ಗಡೆಯವರು ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನವರೆಲ್ಲ ಭಾಗ್ಯವಂತರು. ಪ್ರಾಯೋಗಿಕವಾಗಿ ತಾಲ್ಲೂಕಿನಲ್ಲಿ ಆರಂಭಿಸಿದ ಎಲ್ಲಾ ಯೋಜನೆಗಳು ಯಶಸ್ವಿಯಾದ ಬಗ್ಯೆ ಅವರು ವಿಶೇಷ ಅಭಿನಂದನೆ ಸಲ್ಲಿಸಿದರು.

Pattabhisheka [2]ಸುವರ್ಣ ಸಂಚಯದ ಒಂಭತ್ತು ಅಭಿನಂದನ ಗ್ರಂಥಗಳನ್ನು ಬಿಡುಗಡೆ ಮಾಡಿದ ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ ಹೆಗ್ಗಡೆಯವರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳ ದಾಖಲೆಯೇ ಅಭಿನಂದನ ಗ್ರಂಥಗಳಾಗಿದ್ದು, ಎಲ್ಲಾ ಯೋಜನೆಗಳು ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದ ಸಾಧನೆಗಳಾಗಿದ್ದು ಆದರ್ಶ ಹಾಗೂ ಅನುಕರಣೀಯವಾಗಿವೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಧರ್ಮಸ್ಥಳದ ಅನೇಕ ಯೋಜನೆಗಳನ್ನು ಅನುಕರಿಸಿರುವುದು ಯೋಜನೆಯ ಸಾರ್ಥಕತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಹೆಗ್ಗಡೆಯವರ ಸೇವೆ-ಸಾಧನೆಯಿಂದ ಆತ್ಮ ಸಂತೋಷದೊಂದಿಗೆ ಲೋಕಕಲ್ಯಾಣವೂ ಆಗಿದೆ.

ಹೆಗ್ಗಡೆಯವರಿಗೆ ಚಾವಡಿಯಲ್ಲಿ ಶ್ರೀ ಸ್ವಾಮಿಯ ಪ್ರೇರಣೆಯಿಂದ ಅನೇಕ ಹೊಸ ಯೋಚನೆಗಳು, ಯೋಜನೆಗಳು ಮೂಡಿ ಬರುತ್ತವೆ ಎಂದು ಹೇಮಾವತಿ ವೀ. ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿ.ವಿ.ಯ ನಿವೃತ್ತ ಕುಲಪತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ ಅಭಿನಂದನಾ ಗ್ರಂಥದ ಬಗ್ಯೆ ಸವಿವರ ಮಾಹಿತಿ ನೀಡಿ ಎಲ್ಲರೂ ಈ ಪುಸ್ತಕವನ್ನು ಕೊಂಡು ಓದಬೇಕು ಎಂದು ಸಲಹೆ ನೀಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಅತಿವೃಷ್ಠಿಯಿಂದ ಹಾನಿಗೊಳಗಾದ ನೆರೆಸಂತ್ರಸ್ತರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಿ ಆತ್ಮವಿಶ್ವಾಸ ತುಂಬಬೇಕು. ಪ್ರಕೃತಿ ಸಂರಕ್ಷಣೆ ಮತ್ತು ಜಲಮರುಪೂರಣ ಬಗ್ಯೆ ದೇವರು ಅತಿವೃಷ್ಠಿ ಮೂಲಕ ನಮಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.

ಧರ್ಮಸ್ಥಳದ ವತಿಯಿಂದ ರೈತರಿಗೆ ಭತ್ತ ಹಾಗೂ ಧಾನ್ಯ ಕೊಯ್ಲು ಮಾಡಲು ೫೦ ಕಟಾವು ಯಂತ್ರಗಳನ್ನು ಖರೀದಿಸಲಾಗುವುದು. ಈಗಾಗಲೆ ಚಿತ್ರದುರ್ಗಕ್ಕೆ ೨೦ ಕೊಯ್ಲು ಯಂತ್ರಗಳನ್ನು ಖರೀದಿಸಲಾಗಿದೆ. ಎಂದರು.
ಹೊಸ ಯೋಜನೆಗಳು: ಮೈಸೂರಿನಲ್ಲಿ ಧರ್ಮಸ್ಥಳದ ವತಿಯಿಂದ ಹೊಸ ವಸ್ತು ಸಂಗ್ರಹಾಲಯ ಪ್ರಾರಂಭ, ಉಡುಪಿ ಮತ್ತು ಹಾಸನ ಆಯುರ್ವೇದ ಕಾಲೇಜುಗಳಿಗೆ ೬೦೦ ಹಾಸಿಗೆಗಳ ನೂತನ ಆಸ್ಪತ್ರೆ ಕಟ್ಟಡಗಳ ನಿರ್ಮಾಣ, ಬೆಂಗಳೂರಿನಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣ, ಇದೇ ೩೦ ರಿಂದ ಗ್ರಾಮಾಭಿವೃದ್ಧಿ ಯೋಜನೆ ಬಗ್ಯೆ ಜಾಗತಿಕ ಸಮ್ಮೇಳನ ನಡೆಯಲಿದ್ದು ೩೦ ವಿದೇಶಗಳಿಂದ ನೂರು ಪ್ರತಿನಿಧಿಗಳು ಭಾಗವಹಿಸುವರು ಎಂದು ಹೆಗ್ಗಡೆಯವರು ತಿಳಿಸಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ, ಪ್ರೊ. ಎಸ್. ಪ್ರಭಾಕರ್, ಡಾ. ಬಿ. ಯಶೋವರ್ಮ, ಮೂಡಬಿದ್ರೆಯ ಡಾ.ಎಂ. ಮೋಹನ ಆಳ್ವ,, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಜಮಾ ಉಗ್ರಾಣದ ಮುತ್ಸದ್ಧಿ ಬಿ. ಭುಜಬಲಿ ಸ್ವಾಗತಿಸಿದರು, ಶ್ರೀನಿವಾಸ ರಾವ್ ಧನ್ಯವಾದವಿತ್ತರು ಧನ್ಯವಾದವಿತ್ತರು. ದೀಕ್ಷಿತ್ ರೈ ಕಾರ್ಯಕ್ರಮ ನಿರ್ವಹಿಸಿದರು.