ಮಡಿಕೇರಿ : ಜಾತ್ಯತೀತ ಜನತಾದಳವನ್ನು ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವ ಮತ್ತು ಸಂಘಟಿಸುವ ಉದ್ದೇಶದಿಂದ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ನ.1 ರಂದು ಚಾಲನೆ ನೀಡಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡ್ಲಿಪೇಟೆಯ ಶ್ರೀಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸದಸ್ಯತ್ವ ಅಭಿಯಾನದ ಪಾದಯಾತ್ರೆಯನ್ನು ಆರಂಭಿಸಲಾಗುವುದು ಎಂದರು.
ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಗುಂಪು ಅಭಿಯಾನದ ಯಶಸ್ಸಿಗೆ ಕೈ ಜೋಡಿಸಲಿದೆ. ಮನೆ ಮನೆಗೆ ತೆರಳಿ ಸದಸ್ಯರನ್ನು ಆಯ್ಕೆ ಮಾಡುವುದಲ್ಲದೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 14 ತಿಂಗಳ ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಗಣೇಶ್ ತಿಳಿಸಿದರು.
ರೈತರ ಸಾಲಮನ್ನಾದಂತಹ ದಿಟ್ಟ ನಿರ್ಧಾರವನ್ನು ಕೈಗೊಂಡ ಕುಮಾರಸ್ವಾಮಿ ಅವರು ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸಂತ್ರಸ್ತರಿಗಾಗಿ ಸುಮಾರು 800 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಎರಡು ನೂತನ ತಾಲ್ಲೂಕುಗಳನ್ನು ರಚಿಸುವ ಮೂಲಕ ಕೊಡಗಿನ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದ ಅವರು, ಈ ವಿಚಾರಗಳನ್ನು ಅಭಿಯಾನದ ಸಂದರ್ಭ ಜನರ ಮುಂದಿಡಲಾಗುವುದೆಂದರು.
ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗಣೇಶ್, ಕಾಂಗ್ರೆಸ್ ಪಕ್ಷ ಹೇಳಿಕೆಗಳನ್ನು ತಿರುಚುವುದರಲ್ಲಿ ಮತ್ತು ಸುಳ್ಳನ್ನು ಸತ್ಯಮಾಡುವುದರಲ್ಲಿ ಹೆಸರುವಾಸಿಯಾಗಿದೆ. ಕಾಂಗ್ರೆಸ್ಸಿಗರು ಹಗಲಿನಲ್ಲಿ ಕಾಂಗ್ರೆಸ್‌ನಲ್ಲಿದ್ದು, ರಾತ್ರಿ ಬಿಜೆಪಿಯಲ್ಲಿರುತ್ತಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕೋಮುವಾದವನ್ನು ಹಬ್ಬುವ ಪಕ್ಷವಾಗಿದ್ದು, ಯಾರಿಗೂ ಬೇಡವಾದ ಟಿಪ್ಪು ಜಯಂತಿಯನ್ನು ಆಚರಣೆಗೆ ತಂದಿರುವುದು ಸರಿಯಾದ ಕ್ರಮವಲ್ಲ ಎಂದರು.
ಟಿಪ್ಪುವನ್ನು ವಿವಾದದ ಸುಳಿಯಲ್ಲಿ ನೋಡುವಂತಹ ಪರಿಸ್ಥಿತಿ ಎದುರಾಗಿದ್ದು, ಇದಕ್ಕೆ ಮೂಲ ಕಾರಣ ಕಾಂಗ್ರೆಸ್ ಎಂದು ಆರೋಪಿಸಿದರು. ಜಾತಿ ಮತ್ತು ಪಂಗಡಗಳ ವಿಭಜನೆಯಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಸಾಧ್ಯ ಎಂದರು.
ಜೆಡಿಎಸ್ ಅಲ್ಪಾಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‌ಖಾನ್ ಮಾತನಾಡಿ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದ ಅನರ್ಹ ಶಾಸಕರಿಂದ ಅಲ್ಪಾಸಂಖ್ಯಾತರಿಗೆ ಹೆಚ್ಚು ಅನ್ಯಾಯವಾಗಿದೆ ಎಂದು ಟೀಕಿಸಿದರು. ಅಲ್ಪಸಂಖ್ಯಾತರ ಮತಗಳನ್ನು ಕೂಡ ಅನರ್ಹರು ಪಡೆದಿದ್ದಾರೆ ಎಂದರು.
ಓಲೈಕೆ ಮತ್ತು ಜಾತಿ ರಾಜಕರಣಕ್ಕೆ ಅಲ್ಪಾಸಂಖ್ಯಾತರು ಬಲಿಯಾಗಬಾರದು ಎಂದು ಕರೆ ನೀಡಿದ ಇಸಾಕ್‌ಖಾನ್, ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯ ಮತ್ತು ಕೊಡಗು ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ ಮಾತನಾಡಿ, ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಸುಮಾರು 15 ಕೋಟಿ ರೂ. ಗಳನ್ನು ಜಿಲ್ಲಾಡಳಿತ ಖರ್ಚುಮಾಡದೆ ಉಳಿಸಿಕೊಂಡಿರುವುದರಿಂದ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಮಳೆಹಾನಿಯಿಂದ ನೂರಾರು ಮಂದಿ ಸಂತ್ರಸ್ತರು ಸಂಕಷ್ಟದಲ್ಲೇ ದಿನದೂಡುತ್ತಿದ್ದು, ಸರ್ಕಾರ ಶೀಘ್ರ ಪರಿಹಾರ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಯುವ ಘಟಕದ ಅಧ್ಯಕ್ಷ ಸಿ.ಎಲ್.ವಿಶ್ವ ಹಾಗೂ ಸೋಮವಾರಪೇಟೆ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English