- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

Prakash-Rai [1]ಬೆಂಗಳೂರು : ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾದಿಂದ ಈ ದೂರು ನೀಡಲಾಗಿದೆ. ಜೊತೆಗೆ ಪೊಲೀಸ್ ಆಯುಕ್ತರಿಗೂ ರೈ ವಿರುದ್ಧ ದೂರು ನೀಡಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಪ್ರಕಾಶ್ ರೈಗೆ ನಟನೆ ಮಾಡಲು ಅವಕಾಶ ಕೊಡಬಾರದು. ಹಿಂದೂ ದೇವರ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಚಿತ್ರ ರಂಗದಿಂದ ದೂರವಿಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಭಾಗವಹಿಸಿ ರಾಮಾಯಣದಲ್ಲಿ ಬರುವ ರಾಮ-ಲೀಲಾ ಬಗ್ಗೆ ಮಾತನಾಡುತ್ತಾ, ಅದಕ್ಕೆ ಪೋರ್ನ್ ಸೈಟ್ ಬಗ್ಗೆ ಉದಾಹರಣೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

ರಾಮಲೀಲಾ ಕಾರ್ಯಕ್ರಮದ ಬಗ್ಗೆ ಸಿಟ್ಟಿನಿಂದ ಉತ್ತರಿಸಿದ ಪ್ರಕಾಶ್ ರೈ, ಶ್ರೀರಾಮ, ಸೀತೆ, ಲಕ್ಷ್ಮಣ ಪಾತ್ರಧಾರಿಗಳನ್ನು ಹೆಲಿಕಾಪ್ಟರ್ ಮೂಲಕ ಮುಂಬೈನಿಂದ ಮೇಕಪ್ ಮಾಡಿ ಕರೆತರಲಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ದೇಶದಲ್ಲಿ ನಡೆಯಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಹೇಳಿಕೆಗೆ ನಿರೂಪಕರು, ಎಲ್ಲರಿಗೂ ಅದಕ್ಕೆ ಆಕ್ಷೇಪ ಇರಬೇಕು ಎಂದೇನಿಲ್ಲ. ಇದು ಪ್ರಜಾಪ್ರಭುತ್ವ ದೇಶ, ಎಲ್ಲರ ಭಾವನೆಗೂ ಬೆಲೆ ಕೊಡಬೇಕಾಗುತ್ತದೆ ಎಂದಾಗ ಮಕ್ಕಳು ಪೋರ್ನ್ ಸೈಟ್ ನೋಡುತ್ತಿದ್ದರೆ ಸುಮ್ಮನಿರಲು ಸಾಧ್ಯವೇ? ಈ ರೀತಿಯ ಕಾರ್ಯಕ್ರಮಗಳು ದೇಶಕ್ಕೆ ಅಪಾಯಕಾರಿ. ಇದರಿಂದಾಗಿ ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಭಯದ ಸನ್ನಿವೇಶವನ್ನು ಸೃಷ್ಟಿಸುವುದು ಎಷ್ಟು ಸರಿ ಎಂದು ಮರು ಪ್ರಶ್ನೆ ಹಾಕಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹಿಂದೂಗಳು ದೇವಸ್ಥಾನಕ್ಕೆ ಹೋಗುವುದು, ಅಲ್ಲಿನ ವಿಗ್ರಹಕ್ಕೆ ಪೂಜಿಸುವುದು ಬೆಳೆದುಕೊಂಡು ಬಂದ ಪದ್ಧತಿ. ರಾಮಲೀಲಾ ಮುಂತಾದ ಕಾರ್ಯಕ್ರಮ ನಡೆಸಿ ನಾಟಕ ಮಾಡುವುದು ಯಾಕೆ? ಜನರಿಗೆ ಭಯ ಹುಟ್ಟು ಹಾಕುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.