ಮಂಗಳೂರು : ಭಾರತೀಯ ಜಲ ಸೀಮೆಯ ಒಳಗೆ ಪ್ರವೇಶಿಸಿ ಮೀನುಗಾರಿಕೆಯಲ್ಲಿ ತೊಡಗಿದ್ದ ಇರಾನ್ ದೇಶದ ಅವಿಧಿ ಮತ್ತು ಇಶಾನ್ ಎಂಬ ಬೋಟ್ ಮತ್ತು ಅದರಲ್ಲಿದ್ದ 15 ಮಂದಿಯನ್ನು ಕೋಸ್ಟ್‌ಗಾರ್ಡ್ ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಬಬಕರ್ ಅನ್ಸಾರಿ ಮೀಯಾ, ಮೂಸಾ ದೆಹದಾನಿ, ಅಜಂ ಅನ್ಸಾರಿ, ಶಿದ್ ಬಾಚೂ, ಅಬ್ದುಲ್ ಮಜೀದ್, ಮಜೀದ್ ರೆಹಮಾನಿ ದಾವೂದ್, ಮಹಮ್ಮದ್ ಇಸಾಕ್, ಕರೀಂ ಬಕ್ಸ್ ದೂರ್ ಜಾದೆ, ಮಹಮ್ಮದ್ ಬಲೂಚ್, ಬಮನ್, ಅಬ್ದುಲ್ ಗನಿ ಬಾಪೂರ್, ನಸೀರ್ ಭದ್ರುಜ್, ಅನ್ವರ್ ಬಲೂಚು, ನಭೀ ಬಕ್ಷ, ಯೂಸೂಫ್ ಜಹಾನಿ ಬಂಧಿತರು.
ಅ.21ರಂದು ಭಾರತೀಯ ಕೋಸ್ಟ್‌ಗಾರ್ಡ್‌ನ ವಿಕ್ರಮ್ ಹಡಗಿನಲ್ಲಿ ಡೆಪ್ಯೂಟಿ ಕಮಾಂಡೆಂಟ್, ಬೋರ್ಡಿಂಗ್ ಆಫೀಸರ್ ಹಾಗೂ ಸೈಲರ್‌ಗಳು ಭಾರತೀಯ ಜಲಸೀಮೆಯಲ್ಲಿ ಗಸ್ತು ನಡೆಸುತ್ತಿದ್ದಾಗ, ಲಕ್ಷದ್ವೀಪದಿಂದ ಸುಮಾರು 165 ನಾಟಿಕಲ್ ಮೈಲ್ ದೂರದಲ್ಲಿ ಎರಡು ಬೋಟ್‌ಗಳು ಅನುಮಾನಾಸ್ಪದವಾಗಿ ಮೀನುಗಾರಿಕೆ ಮಾಡುತ್ತಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಇರಾನ್ ದೇಶದ ಅವಿಧಿ ಮತ್ತು ಇಶಾನ್ ಎಂಬ ಮೀನುಗಾರಿಕಾ ಬೋಟುಗಳು ಎಂಬುದು ತಿಳಿದುಬಂತು.
ಬೋಟ್ ನಿಲ್ಲಿಸುವಂತೆ ಸೂಚನೆ ನೀಡಿದರೂ, ಅದರ ಮಾಸ್ಟರ್ ಮುಂದಕ್ಕೆ ಚಲಾಯಿಸಿಕೊಂಡು ಹೋದ. ಇದರಿಂದ ಸಂಶಯಗೊಂಡು ತಡೆದು ನಿಲ್ಲಿಸಿ ಬೋಟಿನ ಮಾಸ್ಟರ್ ಹಾಗೂ ದಾಖಲಾತಿ ಕೇಳಿದಾಗ ತೋರಿಸದೆ ಬೇಜವಾಬ್ದಾರಿಯಾಗಿ ವರ್ತಿಸಿದ್ದರು. ಅವರಲ್ಲಿ ಭಾರತೀಯ ಜಲಪರಿಧಿಯೊಳಗೆ ಬಂದು ಮೀನುಗಾರಿಕೆಯಲ್ಲಿ ತೊಡಗಿರುವುದಕ್ಕೆ ಪರವಾನಿಗೆ ಇರಲಿಲ್ಲ. ಆದ್ದರಿಂದ ಬೋಟುಗಳನ್ನು ವಶಕ್ಕೆ ಪಡೆದು ನವ ಮಂಗಳೂರು ಬಂದರಿಗೆ ಟೋಯಿಂಗ್ ಮಾಡಿ ತರುತ್ತಿರುವಾಗ ಅವಿಧಿ ಹೆಸರಿನ ಬೋಟ್ ತಾಂತ್ರಿಕ ತೊಂದರೆಯಿಂದ ಲಕ್ಷದ್ವೀಪದ ಅಗಥಿ ಬಳಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಅದರಲ್ಲಿದ್ದ ಸಿಬ್ಬಂದಿಯನ್ನು ಇಶಾನ್ ಬೋಟ್‌ನಲ್ಲಿ ನವಮಂಗಳೂರು ಬಂದರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ.
ಈ ಕುರಿತು ಅ.31ರಂದು ಭಾರತೀಯ ತಟರಕ್ಷಣಾ ಪಡೆಯ ಡೆಪ್ಯೂಟಿ ಕಮಾಂಡೆಂಟ್, ಬೋರ್ಡಿಂಗ್ ಆಫೀಸರ್ ಕುಲದೀಪ್ ಶರ್ಮಾ ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಮೆರಿಟೈಮ್ ಜೋನ್ ಆಫ್ ಇಂಡಿಯನ್ ಆ್ಯಕ್ಟ್ 1981 ಕಾಯ್ದೆ 3,7,10, 15(ಎ), 14,15(ಸಿ) ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ನ.14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
Click this button or press Ctrl+G to toggle between Kannada and English