- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಾಸ್ಟೇಲ್ ನೌಕರರ ದಿಢೀರ್ ವಜಾ : ಜೆಡಿಎಸ್ ಅಸಮಾಧಾನ

Hostel-nawkara [1]

ಮಡಿಕೇರಿ : ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೊರ ಸಂಪನ್ಮೂಲ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಅಡುಗೆಯವರು, ಅಡುಗೆ ಸಹಾಯಕರು ಹಾಗೂ ಕಾವಲುಗಾರರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಸೋಮವಾರಪೇಟೆ ತಾಲ್ಲೂಕಿನ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾ ಘಟಕದ ನೇತೃತ್ವದಲ್ಲಿ ಇಂದು ಮಡಿಕೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ ಅವರಿಗೆ ಮನವಿ ಸಲ್ಲಿಸಿದ ನೌಕರರು ತಮಗಾದ ಅನ್ಯಾಯದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.

ಸೋಮವಾರಪೇಟೆ ತಾಲೂಕಿನ ವಿಸ್ತರಣಾಧಿಕಾರಿಗಳು ಹೊರ ಸಂಪನ್ಮೂಲ ನೌಕರರಿಗೆ ವಿನಾಕಾರಣ ಮಾನಸಿಕ ಹಿಂಸೆ ನೀಡಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ, ಕಳೆದ ಐದು ತಿಂಗಳುಗಳಿಂದ ವೇತನವನ್ನೇ ಪಾವತಿ ಮಾಡಿಲ್ಲವೆಂದು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಬಿಸಿಎಂ ಹಾಸ್ಟೇಲ್‌ಗಳಲ್ಲಿ ಸುಮಾರು ಆರು ವರ್ಷಗಳಿಂದ ಹೊರ ಸಂಪನ್ಮೂಲ ನೌಕರರಾಗಿ ದುಡಿಯುತ್ತಿರುವ ಬಡ ಸಿಬ್ಬಂದಿಗಳಿದ್ದಾರೆ. ಆದರೆ ಯಾವುದೇ ಕಾರಣ ನೀಡದೆ ಎಲ್ಲರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Hostel-nawkara [2]

ಈ ವಿಚಾರದಲ್ಲಿ ತಾರತಮ್ಯ ಧೋರಣೆಯನ್ನು ಅನುಸರಿಸಲಾಗಿದ್ದು, ನಿಯಮ ಬಾಹಿರವಾಗಿ ಕೆಲವು ಗುತ್ತಿಗೆ ನೌಕರರನ್ನು ಖಾಯಂಗೊಳಿಸಲಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದವರನ್ನು ಕೈಬಿಟ್ಟು ತಮಗೆ ಬೇಕಾದವರಿಗೆ ಹುದ್ದೆಯನ್ನು ನೀಡಲಾಗಿದೆ. ಇದನ್ನು ಗಮನಿಸಿದರೆ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಗಣೇಶ್ ಸೂಕ್ತ ತನಿಖೆ ನಡೆಸಬೇಕೆಂದು ಅಪರ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.

ಕಳೆದ ಐದು ತಿಂಗಳುಗಳಿಂದ ವೇತನವಿಲ್ಲದೆ ಪರದಾಡುತ್ತಿದ್ದ ನೌಕರರು ಇದೀಗ ಕೆಲಸವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡ ಕುಟುಂಬಗಳು ಮನೆಗೆ ಬೇಕಾದ ಆಹಾರ ಸಾಮಾಗ್ರಿಯನ್ನು ಕೂಡ ಖರೀದಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ, ಉದ್ಯೋಗ ಕಳೆದುಕೊಂಡ ನೌಕರರಿಗೆ ಮರಳಿ ಉದ್ಯೋಗ ನೀಡಬೇಕು. ತಪ್ಪಿದಲ್ಲಿ ಜೆಡಿಎಸ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುದಾಗಿ ಗಣೇಶ್ ಎಚ್ಚರಿಕೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭ ಜೆಡಿಎಸ್ ಖಜಾಂಚಿ ಡೆನ್ನಿ ಬರೋಸ್, ಮಹಾ ಪ್ರಧಾನ ಕಾರ್ಯದರ್ಶಿ ಅದಿಲ್ ಬಾಷ, ಕಾರ್ಯದರ್ಶಿ ಎನ್.ಸಿ.ಸುನೀಲ್, ಸಂಘಟನಾ ಕಾರ್ಯದರ್ಶಿ ಬೆಟ್ಟಗೇರಿ ಅಬ್ದುಲ್ಲ ಇತರ ಪದಾಧಿಕಾರಿಗಳು ಹಾಗೂ ಕೆಲಸ ಕಳೆದುಕೊಂಡ ನೌಕರರು ಹಾಜರಿದ್ದರು.