- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಿ.ಎಚ್.ವಿಜಯಶಂಕರ್ ಇಂದು ಬಿಜೆಪಿಗೆ ಮರುಸೇರ್ಪಡೆ

CH-Vijayshankar [1]

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಇಂದು ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ವಿಜಯಶಂಕರ್ ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಬಿ.ಜೆ.ಪುಟ್ಟಸ್ವಾಮಿ ಸೇರಿದಂತೆ ಮೈಸೂರು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿಎಂ, ವಿಶೇಷ ಕಾರಣಕ್ಕೆ ವಿಜಯಶಂಕರ್ ಅವರು ಪಕ್ಷ ಬಿಟ್ಟಿದ್ದರು. ಆದರೆ ಬಹಳ ದಿನಗಳಿಂದಲೂ ಬಿಜೆಪಿ ಸೇರಲು ಮುಂದಾಗಿದ್ದರು. ಸದ್ಯ ಅವರು ಮತ್ತೆ ಬಿಜೆಪಿಗೆ ಸೇರಿರುವುದರಿಂದ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತದೆ. ಇಡೀ ದೇಶದಲ್ಲಿ ಉಳಿಯುವ ಪಕ್ಷ ಬಿಜೆಪಿ ಮಾತ್ರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇದೇ ವೇಳೆ ಮಾಜಿ ಸಂಸದ ವಿಜಯಶಂಕರ್ ಅವರು ಮಾತನಾಡಿ, ಬಿಜೆಪಿ ಪಕ್ಷ ಬಿಟ್ಟು ಹೋಗಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೋರಿದರು. ನಾನು ಬಿಜೆಪಿ ಬಿಟ್ಟಿದ್ದು ನನ್ನದೇ ತಪ್ಪುಗಳಿಂದ. ಮಾನಸಿಕ ಸ್ಥಿಮಿತ ನಿರ್ವಹಿಸಲಾಗಿರಲಿಲ್ಲ. ಹಾಗಾಗಿ ಪಕ್ಷ ಬಿಟ್ಟು ಹೋದೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ತಪ್ಪು ಎಂದರು.

ನಾನು ಬಿಜೆಪಿ ಬಿಟ್ಟು ಹೋಗಿದ್ದು ನನ್ನ ರಾಜಕೀಯ ಜೀವನದ ಕಪ್ಪು ಚುಕ್ಕೆ. ತಪ್ಪಿನ ಅರಿವು ನನಗಾಗಿದೆ. ನನ್ನಂತೆ ಬೇರೆಯವರು ಇದೇ ರೀತಿ ತಪ್ಪು ಮಾಡಲು ಹೋಗಬೇಡಿ. ನಾನು ಇವತ್ತು ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದೇನೆ. ಬದುಕಿರುವವರೆಗೂ ಬಿಜೆಪಿ ಬಿಟ್ಟು ಹೋಗಲ್ಲ ಎಂದು ಕ್ಷಮೆ ಕೋರಿ ಪಕ್ಷಕ್ಕೆ ಸೇರ್ಪಡೆಯಾದರು.

ವಿಜಯಶಂಕರ್ ಅವರು 2019ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಸೋತಿದ್ದರು. ಈಗ ಮತ್ತೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ವಿಜಯಶಂಕರ್ ಅವರು ಹುಣಸೂರು ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.