- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಋಣಮುಕ್ತ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಲು ಮಹಿಳಾ ಜೆಡಿಎಸ್ ಆಗ್ರಹ

JDS [1]

ಮಡಿಕೇರಿ : ಅ ಕಾಯ್ದೆ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಬೇಕು ಮತ್ತು ವಿವಿಧ ಸಂಘ ಸಂಸ್ಥೆ, ಮೈಕ್ರೋ ಫೈನಾಸ್‌ಗಳಿಂದ ಬಡವರು ಹಾಗೂ ಕಾರ್ಮಿಕರು ಪಡೆದ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಜಾತ್ಯತೀತ ಜನತಾದಳದ ಮಹಿಳಾ ಘಟಕ ಮತ್ತು ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಋಣಮುಕ್ತ ಯೋಜನೆ ಅರ್ಜಿಯನ್ನು ನೀಡಲು ಆಧಾರ್‌ಕಾರ್ಡ್, ಐ.ಡಿ.ಕಾರ್ಡ್, ರೇಷನ್ ಕಾರ್ಡ್, ಭೂಮಿ ಹಿಡುವಳಿ ಪತ್ರ, ಆದಾಯ ದೃಢೀಕರಣ ಪತ್ರ ಹಾಗೂ ಇತರ ದಾಖಲೆಗಳನ್ನು ಹೊಂದಿಸಲು ತಾಂತ್ರಿಕದೋಷ ಅಡ್ಡಿಯಾಗಿತ್ತಲ್ಲದೆ ಮಹಾಮಳೆಯಿಂದಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಸಾಧ್ಯವಾಗಿಲ್ಲ ಎಂದು ಜೆಡಿಎಸ್ ಪ್ರಮುಖರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಅ.22 ಋಣಮುಕ್ತ ಕಾಯ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದರೂ ಅನೇಕರಿಗೆ ಅರ್ಜಿ ಸಲ್ಲಿಸಲಾಗಲಿಲ್ಲ. ಅರ್ಜಿ ನೀಡಲು ಸಾಧ್ಯವಾಗದ ಬಡ ರೈತರು ಹಾಗೂ ಕೂಲಿ ಕಾರ್ಮಿಕರು ಕಣ್ಣೀರು ಹಾಕುವಂತಾಗಿದ್ದು, ಆರ್ಥಿಕ ಪರಿಸ್ಥಿತಿ ಹದಗೆಟ್ಟು ಸಂಕಷ್ಟ ಎದುರಾಗಿದೆ. ಅಸಲು ಹಾಗೂ ಬಡ್ಡಿಯನ್ನು ಪಾವತಿಸಲಾಗದೆ ಆತಂಕದಲ್ಲೇ ದಿನದೂಡುತ್ತಿದ್ದಾರೆ. ಋಣಮುಕ್ತ ಕಾಯ್ದೆಯಿಂದ ಬದುಕು ಹಸನಾಗಬಹುದೆಂದು ಭಾವಿಸಿದ್ದವರಿಗೆ ಅಲ್ಪಾವಧಿಯಿಂದ ನಿರಾಶೆ ಮೂಡಿದೆ. ಆದ್ದರಿಂದ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಮಹಿಳಾ ಜೆಡಿಎಸ್ ಜಿಲ್ಲಾಧ್ಯಕ್ಷೆ ಶಾಂತಿಅಚ್ಚಪ್ಪ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಜನ ಸಂಕಷ್ಟಕ್ಕೆ ಸಿಲುಕಿರುವಾಗಲೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಮಿತಿಮೀರಿದೆ ಎಂದು ಆರೋಪಿಸಿದರು. ಬಡ ಮಹಿಳಾ ಗುಂಪುಗಳಿಗೆ ಆರ್ಥಿಕ ನೆರವು ಒದಗಿಸುವ ನೆಪದಲ್ಲಿ ಸಾಲನೀಡಿ ಇದೀಗ ದೌರ್ಜನ್ಯದಿಂದ ಸಾಲವಸೂಲಿ ಮಾಡಲಾಗುತ್ತಿದೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನೆಲ್ಲ ಸಾಲ ಮತ್ತು ಬಡ್ಡಿ ಪಾವತಿಸುವುದಕ್ಕಾಗಿಯೇ ಬಡವರು ವ್ಯಯ ಮಾಡುತ್ತಿದ್ದಾರೆ. ಮಹಾಮಳೆಯ ಅನಾಹುತಗಳಿಂದ ನಲುಗಿರುವ ಗ್ರಾಮೀಣ ಜನರು ಚೇತರಿಸಿಕೊಳ್ಳುವ ಮೊದಲೇ ಸಾಲ ನೀಡಿರುವ ಸಂಸ್ಥೆಗಳು ಮಾನಸಿಕ ಕಿರುಕುಳ ನೀಡಲು ಆರಂಭಿಸಿವೆ. ಮನೆಯ ಮುಂದೆ ನಿಂತು ಬಡ ಕುಟುಂಬಗಳ ಸ್ವಾಭಿಮಾನಕ್ಕೆ ದಕ್ಕೆ ತರುತ್ತಿರುವ ಫೈನಾನ್ಸ್ ಸಿಬ್ಬಂದಿಗಳು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಸಾಲ ನೀಡಿದವರಿಂದ ಗೋಣಿಕೊಪ್ಪದ ಪೌರ ಕಾರ್ಮಿಕರಿಗೆ ಹೆಚ್ಚು ಕಿರುಕುಳವಾಗುತ್ತಿದೆ ಎಂದು ಶಾಂತಿಅಚ್ಚಪ್ಪ ಆರೋಪಿಸಿದರು.

ಜಿಲ್ಲಾಡಳಿತ ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಇನ್ನು ಮುಂದೆ ಸಾಲ ವಸೂಲಾತಿಗೆ ಕಿರುಕುಳ ನೀಡದಂತೆ ಸೂಚನೆ ನೀಡಬೇಕು, ಸಾಲಮನ್ನಾ ಮಾಡಬೇಕು ಮತ್ತು ಋಣಮುಕ್ತ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಪ್ರಮುಖರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಸುನಂದ, ಉಪಾಧ್ಯಕ್ಷೆ ಮಮತ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷೆ ಕುಸುಮಾವತಿ ಚಂದ್ರಶೇಖರ್, ಪೊನ್ನಂಪೇಟೆ ತಾಲ್ಲೂಕು ಹೋಬಳಿ ಅಧ್ಯಕ್ಷೆ ಹೆಚ್.ಎನ್.ಮಂಜುಳಾ, ಗೋಣಿಕೊಪ್ಪ ಗ್ರಾಮಾಂತರ ಅಧ್ಯಕ್ಷೆ ಹೆಚ್.ಹೆಚ್.ಪುಷ್ಪ, ಪ್ರಮುಖರಾದ ಪ್ರವೀಣ್ ಕುಮಾರ್ ಪಾಲಿಬೆಟ್ಟ ಹಾಗೂ ಕರ್ನಾಟಕ ಮಾನವ ಹಕ್ಕು ಸಮಿತಿಯ ಕಾರ್ಯಕರ್ತ ಸಿ.ಎಸ್.ವಿಜಯಕುಮಾರ್ ಕೊಡ್ಲಿಪೇಟೆ ಹಾಜರಿದ್ದರು. ಫೋಟೋ :: ಮಹಿಳಾ ಜೆಡಿಎಸ್