- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಹುಗ್ರಾಮ ಕುಡಿಯುವ ನೀರು ಒದಗಿಸಬೇಕೆನ್ನುವುದು ನನ್ನ ಕನಸಾಗಿತ್ತು : ಮಾಜಿ ಸಚಿವ ಬಿ.ರಮಾನಾಥ ರೈ

Ramanath-Rai [1]

ಬಂಟ್ವಾಳ : ತಾಲೂಕಿನ ಜನತೆಗೆ ಶುದ್ಧಕುಡಿಯುವ ನೀರನ್ನು ಒದಗಿಸುವ 5 ಯೋಜನೆಗಳನ್ನು ತಾಲೂಕಿಗೆ ಮಂಜೂರು ಮಾಡಿ ಮೂರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ತೃಪ್ತಿ ನನ್ನಲ್ಲಿದೆ, ಇಡೀ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರು ಒದಗಿಸಬೇಕೆನ್ನುವುದು ನನ್ನ ಕನಸಾಗಿತ್ತು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

ಅವರು ಪೆರಾಜೆ ಬಹುಗ್ರಾಮ ಕುಡಿಯುವ ನೀರಿನ ಘಟಕ ಕ್ಕೆ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ರೈ ಅವರ ಜೊತೆ ಭೇಟಿ ನೀಡಿದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಮಹತ್ವದ 5 ಯೋಜನೆಗಳು ಮಂಜೂರಾಗಿದ್ದು, ಈಗಾಗಲೇ 26 ಕೋಟಿ ವೆಚ್ಚದ ಕರೋಪಾಡಿ ಹಾಗೂ 36 ಕೋಟಿ ವೆಚ್ಚದ ಸಂಗಬೆಟ್ಟು ಯೋಜನೆಗಳು ಅನುಷ್ಠಾನಗೊಂಡಿದ್ದು, ಮಾಣಿ ಮೂರನೇ ಯೋಜನೆಯಾಗಿದ್ದು, ಟೆಂಡರ್ ಮೊತ್ತ 19 ಕೋಟಿ ವೆಚ್ಚದಲ್ಲಿ ಅನುಷ್ಠಾನ ಹಂತದಲ್ಲಿದೆ ಎಂದವರು ವಿವರಿಸಿದರು.

ಸರಪಾಡಿ ಮತ್ತು ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೂಡ ಪ್ರಗತಿಯಲ್ಲಿದೆ. ಬಹುಗ್ರಾಮ ಯೋಜನೆಯಿಂದ ಹೊರಗುಳಿದಿರುವ ವೀರಕಂಬ ಬೋಳಂತರೂ, ಸಜೀಪ ಮೂಡ ಗ್ರಾಮಗಳನ್ನು ಮಂಗಳೂರು ಕ್ಷೇತ್ರದ ಮುಡಿಪು ಸ್ಕೀಮ್ ಗೆ ಸೇರಿಸಲಾಗುವುದು.

ಅಮ್ಮುಂಜೆ, ಕರಿಯಂಗಳ ಗ್ರಾಮವನ್ನು ಮಂಗಳೂರು ಉತ್ತರ ಕ್ಷೇತ್ರದ ಉಳಾಯಿಬೆಟ್ಟು ಯೋಜನೆಗೆ ಸೇರಿಸಲಾಗುವುದು. ‌ಇದು ಸೇರಿದರೆ ನೂರಕ್ಕೆ ನೂರು ತಾಲೂಕಿನ ಎಲ್ಲಾ ಗ್ರಾಮಗಳು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೇರಿ ಇತಿಹಾಸ ನಿರ್ಮಾಣವಾಗುತ್ತದೆ.

ಬೋರ್ ವೆಲ್ ಅನ್ನು ನಂಬಿ ಇನ್ನು ಜೀವನ ಕಷ್ಟ ಸಾಧ್ಯವಾಗಬಹುದು. ಈ ಹಂತದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಪಶ್ಚಿಮ ವಾಹಿನಿ ಯೋಜನೆ ಜಿಲ್ಲಾ ಉಸ್ತವಾರಿ ಸಚಿವನಾಗಿದ್ದ ವೇಳೆ ನನ್ನ ಮುಂದಾಳತ್ವದಲ್ಲಿ ಮಾಡಿದ ಸಂತೋಷ ಇದೆ ಎಂದ ಅವರು, ಕಳೆದ ಸರ್ಕಾರದ ಸಂದರ್ಭದಲ್ಲಿ ಮಂಜೂರುಗೊಳಿಸಿದ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಶ್ರಮಿಸಿದ ಎಲ್ಲಾ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.