ನವದೆಹಲಿ : ಅಯೋಧ್ಯೆ ಜಮೀನು ವಿವಾದದ ಮೂಲ ದಾವೆಯ ಮೇಲೆ 40 ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ಭಾರತದ ಸಾಮಾಜಿಕ-ರಾಜಕೀಯ ಇತಿಹಾಸವನ್ನೇ ಬದಲಿಸಿದ 130 ವರ್ಷಗಳ ಹಿಂದಿನ ಈ ಪ್ರಕರಣದ ಅಂತಿಮ ತೀರ್ಪನ್ನು ಶನಿವಾರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ.
ಮುಂದಿನ ಬುಧವಾರ ಅಥವಾ ಗುರುವಾರ ತೀರ್ಪು ಬರಬಹುದೆಂದು ಭಾವಿಸಲಾಗಿತ್ತಾದರೂ ಅನಿರೀಕ್ಷಿತ ಎಂಬಂತೆ ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಸುಪ್ರೀಂಕೋರ್ಟ್ ವೆಬ್ಸೈಟ್ನಲ್ಲಿ ಶನಿವಾರ ತೀರ್ಪು ಪ್ರಕಟಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಶನಿವಾರ ಕೋರ್ಟ್ಗೆ ರಜೆಯಿದ್ದರೂ ಸಿಜೆಐ ಪ್ರಕರಣದ ಸಹ ನ್ಯಾಯಮೂರ್ತಿಗಳೊಂದಿಗೆ ರ್ಚಚಿಸಿಯೇ ತೀರ್ಪು ನೀಡುವ ತೀರ್ವನಕ್ಕೆ ಬಂದಿದ್ದಾರೆ. ಇದಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಜತೆೆ ಮಾತುಕತೆ ನಡೆಸಿದ್ದ ಸಿಜೆಐ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಭದ್ರತೆ ಬಗ್ಗೆ ಮಾಹಿತಿ ತೃಪ್ತಿಕರ ಎನಿಸಿದ ಬಳಿಕವೇ ಈ ತೀರ್ಮಾನ ಕೈಗೊಂಡರು ಎಂದು ಹೇಳಲಾಗಿದೆ.
ಏತನ್ಮಧ್ಯೆ ರಫೇಲ್ ವಿಮಾನ ಖರೀದಿ, ಸಿಜೆಐ ಅವರನ್ನು ಆರ್ಟಿಐ ವ್ಯಾಪ್ತಿಗೆ ತರಬೇಕೆ ಬೇಡವೇ ಹಾಗೂ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಬೇಕೇ ಬೇಡವೇ ಎಂಬ ಪ್ರಕರಣಗಳ ಬಗ್ಗೆಯೂ ಸಿಜೆಐ ನೇತೃತ್ವದ ನ್ಯಾಯಪೀಠ ಮುಂದಿನ ಶುಕ್ರವಾರದ ಒಳಗಾಗಿ ತೀರ್ಪು ನೀಡಬೇಕಿರುವುದರಿಂದ, ಅತ್ಯಂತ ಸೂಕ್ಷ್ಮ ಅಯೋಧ್ಯೆ ಪ್ರಕರಣಕ್ಕೆ ಶನಿವಾರವೇ ತೀರ್ಪು ನೀಡಲು ಮುಂದಾಗಿರಬಹುದು ಎಂದೂ ರ್ಚಚಿಸಲಾಗಿದೆ.
ಶನಿವಾರ ಅಂತಿಮ ತೀರ್ಪಿನ ಮೂಲಕ ಸುಪ್ರೀಂಕೋರ್ಟ್ ಅಯೋಧ್ಯೆಯಲ್ಲಿ ಹೊಸ ಚರಿತ್ರೆ ಬರೆಯುವುದೋ ಇಲ್ಲವೋ ಗೊತ್ತಿಲ್ಲ. ಆದರೆ, ನ. 17ರಂದು ನಿವೃತ್ತಿಯಾಗುತ್ತಿರುವ ಅಸ್ಸಾಂ ಮೂಲದ ಸಿಜೆಐ ರಂಜನ್ ಗೊಗೊಯ್ ಮಾತ್ರ ಈ ತೀರ್ಪಿನ ಮೂಲಕ ಚರಿತ್ರೆಯ ಪುಟಗಳಲ್ಲಿ ಮಹತ್ತರ ಸ್ಥಾನ ಪಡೆಯುವುದಂತೂ ನಿಜ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮನ ಮಂದಿರ ನಿರ್ವಣವಾಗಬೇಕು ಎಂಬುದು ಹಿಂದು ಶ್ರದ್ಧಾಳುಗಳ ಆಶಯವಾಗಿದ್ದರೆ, ಧ್ವಂಸಗೊಂಡ ಬಾಬರಿ ಮಸೀದಿ ಅದೇ ಸ್ಥಳದಲ್ಲಿ ಪುನರುತ್ಥಾನಗೊಳ್ಳಬೇಕು ಎನ್ನುವುದು ಸುನ್ನಿ ವಕ್ಪ್ ಮಂಡಳಿ ಮತ್ತು ಬೆಂಬಲಿಗರ ಬೇಡಿಕೆಯಾಗಿದೆ.
ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿದ್ದು, ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪುರಾತತ್ವ ಇಲಾಖೆ ಸಮೀಕ್ಷೆ ಸಾಕ್ಷಿ: ತಮ್ಮ ಪ್ರತಿಪಾದನೆಗಳನ್ನು ಸಮರ್ಥಿಸಿಕೊಳ್ಳಲು ಹಿಂದು-ಮುಸ್ಲಿಂ ಪಾರ್ಟಿಗಳು ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆಗಳನ್ನೇ ಸಾಕ್ಷ್ಯವನ್ನಾಗಿ ಬಳಸಿಕೊಂಡಿರುವುದು ಗಮನಾರ್ಹ. ‘ಮಸೀದಿಯ ಸ್ತಂಭಗಳ ಮೇಲೆ ದೇವನಾಗರಿ ಲಿಪಿಯಲ್ಲಿ ಶಾಸನಗಳಿರುವ ಜತೆಗೆ ಮಸೀದಿ ಧ್ವಂಸಗೊಂಡ ಬಳಿಕ ಸಿಕ್ಕ ಅವಶೇಷಗಳಲ್ಲೂ ಇದು ಪತ್ತೆಯಾಗಿದೆ. ಒಳಭಾಗದಲ್ಲಿ ಗರ್ಭಗುಡಿಯೊಂದು ಪತ್ತೆಯಾಗಿ, ಇದು ವಿಷ್ಣುವಿನ ಮಂದಿರವಾಗಿದ್ದಿರಬಹುದು’ ಎಂಬ ಇಲಾಖೆ ವರದಿಯನ್ನು ಹಿಂದು ಸಂಘಟನೆ ಪರ ವಕೀಲರು ಸುಪ್ರೀಂಕೋರ್ಟ್ ಗಮನಕ್ಕೂ ತಂದಿದ್ದಾರೆ. ಅಲಹಾಬಾದ್ ಹೈಕೋರ್ಟ್ನ ನ್ಯಾ. ಧರಂವೀರ್ ಶರ್ಮ ಅವರು ತಮ್ಮ ತೀರ್ಪಿನಲ್ಲಿ ಇದೇ ಅಂಶಗಳನ್ನು ಉಲ್ಲೇಖಿಸಿ, ಇದು ಕಟ್ಟಡ ಮಸೀದಿ ರೂಪದಲ್ಲಿದ್ದರೂ, ದೇವನಾಗರಿ ಲಿಪಿಯಲ್ಲಿರುವ 265 ಶಾಸನಗಳು ಪತ್ತೆಯಾಗಿರುವುದರಿಂದ ಈ ವಿವಾದಿತ ಹೊರಾಂಗಣ ಮತ್ತು ಒಳಾಂಗಣಕ್ಕೆ ಅನ್ಯ ಧರ್ಮದವರಿಗೂ ಪ್ರವೇಶವಿತ್ತು ಎಂಬುದು ಸ್ಪಷ್ಟಗೊಳ್ಳುತ್ತದೆ. ಅದಲ್ಲದೆ, ಒಳಾಂಗಣ ಮತ್ತು ಹೊರಾಂಗಣ ಮುಸ್ಲಿಮರಿಗೆ ಸೇರಿದ್ದು ಎಂದು ಸುನ್ನಿ ವಕ್ಪ ಮಂಡಳಿ ದಾಖಲೆಗಳಲ್ಲಿ ಅಡಕಗೊಂಡಿಲ್ಲ ಎಂದು ದಾಖಲಿಸಿದ್ದರು ಎಂಬುದನ್ನೂ ವಿವರಿಸಲಾಗಿದೆ. ಅದೇ ರೀತಿ, ಮೀರ್ ಬಾಕಿ ಈ ಮಸೀದಿಯನ್ನು ನಿರ್ಮಾಣ ಮಾಡಿದ್ದ ಎಂಬುದಕ್ಕೆ ಶಾಸನಗಳನ್ನು ಸಾಕ್ಷ್ಯಗಳನ್ನಾಗಿ ತೋರಿಸಿರುವ ಮುಸ್ಲಿಂ ಪಾರ್ಟಿಗಳು, ಯುದ್ಧದಲ್ಲಿ ಮೃತಪಟ್ಟ ಮುಸ್ಲಿಮರ ಸಮಾಧಿಗಳಿರುವುದನ್ನೂ ವಾದ ಮಂಡನೆ ವೇಳೆ ದಾಖಲೆಯನ್ನಾಗಿ ಸಲ್ಲಿಸಿವೆ. ಈ ಭೂಮಿಯ ಮೂಲ ಹಕ್ಕುದಾರ ಯಾರು ಎಂಬುದನ್ನು ನಿರ್ಧರಿಸಲು ಕೋರ್ಟ್ಗೆ ಈ ಸಾಕ್ಷಿಗಳು ಅತ್ಯಂತ ಪ್ರಮುಖವಾಗಬಲ್ಲವು ಎಂಬುದಾಗಿ ಕಾನೂನು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
Click this button or press Ctrl+G to toggle between Kannada and English