- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

2.77 ಎಕರೆ ಮಂದಿರ ನಿರ್ಮಾಣವಾಗಲಿ, ಮಸೀದಿಗೆ 5 ಎಕರೆ ಪರ್ಯಾಯ ನಿವೇಶನ : ಸುಪ್ರೀಂ ಕೋರ್ಟ್

supreem-court [1]

ನವದೆಹಲಿ : ಸುಪ್ರೀಂ ಕೋರ್ಟ್ನ ಪಂಚ ಸದಸ್ಯ ಸಾಂವಿಧಾನಿಕ ಪೀಠ ದಶಕಗಳಿಂದ ಬಾಕಿ ಇದ್ದ ರಾಮ ಜನ್ಮಭೂಮಿ, ಬಾಬರಿ ಮಸೀದಿ ಭೂವಿವಾದವನ್ನು ಶುಕ್ರವಾರ ಇತ್ಯರ್ಥಗೊಳಿಸಿದೆ. ಇದರಂತೆ, ವಿವಾದಕ್ಕೀಡಾಗಿದ್ದ 2.77 ಎಕರೆ ಪ್ರದೇಶ ಕಂದಾಯ ದಾಖಲೆಗಳ ಪ್ರಕಾರ ಸರ್ಕಾರಕ್ಕೆ ಸೇರಿದೆ. ಅಲ್ಲಿ ರಾಮಮಂದಿರ ನಿರ್ಮಿಸಬಹುದು. ಆದರೆ, ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ನಿವೇಶನವನ್ನು ಸರ್ಕಾರ ಒದಗಿಸಬೇಕು ಎಂದು ಕೋರ್ಟ್ ನಿರ್ದೆಶಿಸಿದೆ.

ಭಾರತ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಧಿಕ ಸಂಚಲನ ಸೃಷ್ಟಿಸಿದ್ದ ಪ್ರಕರಣದ ಐತಿಹಾಸಿಕ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ, ಮಸೀದಿ ನಿರ್ಮಾಣಕ್ಕೆ ಬೇಕಾದ ನಿವೇಶನವನ್ನು ಸರ್ಕಾರ ವಕ್ಫ್ ಮಂಡಳಿಗೆ ಅಯೋಧ್ಯೆಯ ಪ್ರಮುಖ ಪ್ರದೇಶದಲ್ಲೇ ನೀಡಬೇಕು. ಅದೇ ರೀತಿ, ಹಿಂದುಗಳ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಒಂದನ್ನು ರಚಿಸಬೇಕು. ಅದರ ಸುಪರ್ದಿಗೆ ಈ 2.77 ಎಕರೆ ಭೂಮಿಯನ್ನು ವಹಿಸಬೇಕು. ಈ ಕೆಲಸವನ್ನು ಮೂರು ತಿಂಗಳ ಒಳಗಾಗಿ ಮಾಡಬೇಕು ಎಂದು ಸೂಚಿಸಿದೆ.

ಸುಪ್ರೀಂಕೋಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್.ಎ. ಬಾಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ನ್ಯಾಯಪೀಠ ಸೆಪ್ಟೆಂಬರ್ 16ರಿಂದ ನಲವತ್ತು ದಿನಗಳ ಕಾಲ ನಿರಂತರ ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.