ಮಡಿಕೇರಿ : ರಸ್ತೆ ವಿಸ್ತರಣೆಯಂತಹ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕೆ ಹೊರತು ಅಡ್ಡಿ ಪಡಿಸಬಾರದೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮನವಿ ಮಾಡಿದ್ದಾರೆ.
ವಿರಾಜಪೇಟೆ ಸುಂಕದಕಟ್ಟೆ ತಿರುವಿನಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣಾ ಕಾರ್ಯಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು. ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಲೇ ಇದ್ದು, ವಾಹನದಟ್ಟಣೆಯೂ ಹೆಚ್ಚಾಗುತ್ತಿದೆ. ಕಳೆದ ಹಲವು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದೆ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ರಸ್ತೆ ವಿಸ್ತರಣೆ ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಅರ್ಹರಿಗೆ ಪರಿಹಾರ ನೀಡಲಾಗುತ್ತದೆ, ಆದರೆ ಎಲ್ಲರೂ ಪರಿಹಾರವನ್ನು ನಿರೀಕ್ಷೆ ಮಾಡುವುದು ಸರಿಯಲ್ಲವೆಂದು ಬೋಪಯ್ಯ ಹೇಳಿದರು. ಇದೀಗ ಕಾಮಗಾರಿ ಆರಂಭಿಸಲಾಗಿದ್ದು, ನಿಗಧಿತ ಅವಧಿಯಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಮ್ಮತ್ತಿ ಗ್ರಾಮದಿಂದ ಆರಂಭಗೊಂಡು ವೀರಾಜಪೇಟೆ ನಗರದ ಮುಖ್ಯ ಬೀದಿ ಮೀನುಪೇಟೆಯವರೆಗಿನ 10ಕಿಮೀ ಉದ್ದ,7 ಮೀ ಅಗಲದ ರಸ್ತೆ ಕಾಮಗಾರಿ ಕೊಣನೂರು ಮಾಕುಟ್ಟದ ಮುಂದುವರೆದ ಭಾಗದ ಕಾಮಗಾರಿ ಎಂದು ಮುಖ್ಯ ಅಭಿಯಂತರರು ಮಾಹಿತಿ ನೀಡಿದರು.
ಕಾಮಗಾರಿಯ ಭೂಮಿ ಪೂಜೆ ಸಂದರ್ಭ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಧರ್, ಲೋಕೋಪಯೊಗಿ ಇಲಾಖೆಯ ಅಭಿಯಂತರರಾದ ಸುರೇಶ್, ಜಿಪಂ ಸದಸ್ಯರಾದ ಶಶಿ ಸುಬ್ರಮಣಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಸ್ಮಿತಾ ಪ್ರಕಾಶ್, ಸದಸ್ಯರಾದ ಬಿ.ಎಂ ಗಣೇಶ್, ಪಟ್ಟಣ ಪಂಚಾಯ್ತಿ ಸದಸ್ಯರು,
ಗುತ್ತಿಗೆದಾರ ವಿ.ಟಿ ದಿನೇಶ್ ಕುಮಾರ್, ಆಟೋ ಚಾಲಕರ ಸಂಘದ ಸದಸ್ಯರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಹಾಜರಿದ್ದರು.
ನಗರದ ಸುಂಕದಕಟ್ಟೆಯಿಂದ ಮೀನುಪೇಟೆಯವರೆಗೆ 14.50 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ರಸ್ತೆ ವಿಸ್ತರಣಾ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.
Click this button or press Ctrl+G to toggle between Kannada and English