- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಖಾಸಗಿ ಬಸ್-ಲಾರಿ ಮುಖಾಮುಖಿ ಡಿಕ್ಕಿ : ಭೀಕರ ಅಪಘಾತಕ್ಕೆ 14 ಮಂದಿ ಬಲಿ

Jaipura [1]

ಜೈಪುರ : ಬೆಳ್ಳಂಬೆಳಗ್ಗೆ ಖಾಸಗಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ 14 ಮಂದಿ ಮೃತಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಇಂದು ಬೆಳಗ್ಗೆ 7:30ರ ವೇಳೆಗೆ ರಾಜಸ್ಥಾನದ ದಂಗರ್ ಗಢ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಬಸ್ಸು ಬಿಕಾನೆರ್ ನಿಂದ ಜೈಪುರದತ್ತ ಸಾಗುತ್ತಿತ್ತು. ಈ ವೇಳೆ ದಂಗರ್ ಗಢ ಬಳಿ ಏಕಾಏಕಿ ಎದುರಿನಿಂದ ಬರುತ್ತಿದ್ದ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಲಾರಿ ಮುಂಭಾಗ ಬಸ್ ಒಳಗೆ ನುಗ್ಗಿದೆ. ಲಾರಿ ಒಳಗಡೆ ನುಗ್ಗಿದ ಪರಿಣಾಮ ಬಸ್ಸಿನ ಸೀಟ್‍ಗಳು ಹಾರಿ ನೆಲಕ್ಕೆ ಬಿದ್ದಿದೆ. ಸ್ವಲ್ಪ ಸಮಯದ ನಂತರ ಎರಡೂ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಭೀಕರ ಅಪಘಾತದ ನಂತರ ಪ್ರಯಾಣಿಕರ ಚೀರಾಟ ಕೇಳಿ ಸ್ಥಳೀಯರು ತಕ್ಷಣ ಸಹಾಯಕ್ಕಾಗಿ ಧಾವಿಸಿದರು. ಹಾಗೆಯೇ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಆದರೆ ಅಪಘಾತದಲ್ಲಿ 10 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 20ರಿಂದ 25 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 4 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಹಾಗೆಯೇ ಹಲವರ ಸ್ಥತಿ ಗಂಭಿರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಪಘಾತ ಸಂಭವಿಸಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಸ್ಥಳದಲ್ಲಿ ವಾಹನಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ.

ಈ ಬಗ್ಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಎನ್‍ಎಚ್ 11ರಲ್ಲಿ ನಡೆದ ಅಪಘಾತದ ವಿಷಯ ತಿಳಿದು ನೋವಾಗಿದೆ. ಅಪಘಾತದಲ್ಲಿ ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಇದು ಹೃದಯ ಕದಡುವ ಸಂಗತಿ, ಮೃತರ ಕುಟುಂಬಸ್ಥರ ಸ್ಥಿತಿ ಏನೆಂದು ನನ್ನಿಂದ ಆಲೋಚಿಸಲೂ ಸಾಧ್ಯವಿಲ್ಲ. ಅವರಿಗೆ ಈ ನೋವನ್ನು ತಡೆಯುವ ಶಕ್ತಿ ದೇವರು ಕೊಡಲಿ. ಗಾಯಾಳುಗಳಿಗಾಗಿ ಪ್ರಾರ್ಥಿಸೋಣ ಎಂದು ಟ್ವೀಟ್ ಮಾಡಿದ್ದಾರೆ.