ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ : 144 ಹಾಡಿಗಳಲ್ಲಿ ಸರ್ವೇ ಕಾರ್ಯ ಪೂರ್ಣ

11:07 AM, Tuesday, November 19th, 2019
Share
1 Star2 Stars3 Stars4 Stars5 Stars
(No Ratings Yet)
Loading...

Madikeri

ಮಡಿಕೇರಿ : ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಿ ಜಿಲ್ಲೆಯಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಅಗತ್ಯ ಕ್ರಮಕೈಗೊಂಡು ಐಟಿಡಿಪಿ, ನಗರಸಭೆ ಇಲಾಖೆಗಳ ಮೂಲಕ ಗಿರಿಜನ ಕಾಲೋನಿ, ಹಾಡಿಗಳು ಹಾಗೂ ನಗರ, ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಹಾಗೂ ಕ್ಷಯರೋಗ ಪತ್ತೆ ಕಾರ್ಯದಲ್ಲಿ ಕಾಫಿ ತೋಟದ ಲೈನ್‌ಮನೆಗಳಲ್ಲಿ ವಾಸವಿರುವ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆನಂದ್ ಅವರು ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಮಾಹಿತಿ ನೀಡುತ್ತಾ ನವೆಂಬರ್, 25 ರಿಂದ ಡಿಸೆಂಬರ್, 10ರವರೆಗೆ ಕ್ಷಯರೋಗ ಆಂದೋಲನ ಕಾರ್ಯಕ್ರಮವನ್ನು ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲೆಯ 163ಹಾಡಿಗಳ ಪೈಕಿ 144 ಹಾಡಿಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಆಶಾ ಕಾರ್ಯಕರ್ತರ ತಂಡವು ಮನೆ ಮನೆಗಳಿಗೆ ಭೇಟಿ ನೀಡಿ ಕ್ಷಯ ರೋಗದ ಲಕ್ಷಣ, ಚಿಕಿತ್ಸೆ, ಇವುಗಳ ಬಗ್ಗೆ ಸಮಾಲೋಚನೆ ನಡೆಸಿ ಅವಶ್ಯಪಟ್ಟ ರೋಗಿಗಳ ಕಫದ ಮಾದರಿಗಳನ್ನು ಸಹ ಸ್ಥಳದಲ್ಲಿಯೇ ಸಂಗ್ರಹಿಸಿ ಸಮೀಪದ ನಿಯೋಜಿತ ಕಫ ಪರೀಕ್ಷಾ ಕೇಂದ್ರಗಳಿಗೆ ಸಾಗಿಸಿ ಪರೀಕ್ಷೆ ನಡೆಸಲಾಗುವುದು ಹಾಗೂ ಕಫದಲ್ಲಿ ಕ್ಷಯರೋಗ ದೃಡಪಡದ ಶಂಕಿತ ರೋಗಿಗಳ ಕ್ಷಯ ಕಿರಣ ಪರೀಕ್ಷೆಯನ್ನು ನಡೆಸಲಾಗುವುದು. ಕ್ಷಯ ಕಿರಣದಲ್ಲಿ ಕ್ಷಯರೋಗದ ಪ್ರಕರಣ ದೃಢಪಟ್ಟಲ್ಲಿ ಈ ರೋಗಿಗಳ ಕಫದ ಮಾದರಿ ಸಂಗ್ರಹಿಸಿ ಸಿ.ಬಿ.ನ್ಯಾಟ್ ಯಂತ್ರದ ಮೂಲಕ ಪರೀಕ್ಷೆ ನಡೆಸಿ ರೋಗ ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮೈಸೂರು ವಿಭಾಗದ ಡಬ್ಲ್ಯುಎಚ್‌ಒ ಸಲಹೆಗಾರರಾದ ಡಾ.ಸುದೀರ್ ನಾಯಕ್, ವೈದ್ಯಕೀಯ ಅಧೀಕ್ಷಕರಾದ ಡಾ.ಲೋಕೇಶ್, ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮಾರ್, ಡಾ.ಕೃಷ್ಣಾನಂದ, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಹಾಜರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English