- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಶ್ವಕಪ್‌ ಹಾಕಿ ಪಂದ್ಯಾವಳಿ-2023 : ಒಡಿಶಾ ಆತಿಥ್ಯ

Hockey [1]

ಭುವನೇಶ್ವರ : ಪ್ರತಿಷ್ಠಿತ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಆತಿಥ್ಯ ಸತತ 2ನೇ ಸಲ ಭಾರತದ ಪಾಲಾಗಿದೆ. 2023ರ ಪುರುಷರ ವಿಭಾಗದ ವಿಶ್ವಕಪ್‌ ಪಂದ್ಯಗಳು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿವೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಬುಧವಾರ ಘೋಷಿಸಿದರು.
ಈ ಪಂದ್ಯಾವಳಿ 2023ರ ಜ. 13ರಿಂದ 29ರ ತನಕ ನಡೆಯಲಿದೆ.

“ನಾವು 2018ರ ವಿಶ್ವಕಪ್‌ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದೆವು. ಈಗ 2023ರಲ್ಲಿ ಮತ್ತೆ ಈ ಪ್ರತಿಷ್ಠಿತ ಕೂಟದ ಆತಿಥ್ಯ ಭಾರತದ್ದಾಗಿದೆ. ಈ ಸ್ಪರ್ಧೆಗಳು ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿವೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತದೆ’ ಎಂದು ನವೀನ್‌ ಪಟ್ನಾಯಕ್‌ ಇಲ್ಲಿನ “ಕಳಿಂಗ ಸ್ಟೇಡಿಯಂ’ನಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಘೋಷಿಸಿದರು.

ಅಂತಾರಾಷ್ಟ್ರೀಯ ಹಾಕಿ ಫೆಡರೇ ಶನ್‌ ಹಾಗೂ ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ ಅಧ್ಯಕ್ಷ ನರೀಂದರ್‌ ಬಾತ್ರಾ, ಹಾಕಿ ಇಂಡಿಯಾದ ಅಧ್ಯಕ್ಷ ಮೊಹಮ್ಮದ್‌ ಮುಷ್ತಾಕ್‌ ಅಹ್ಮದ್‌, ಒಡಿಶಾದ ಕ್ರೀಡಾ ಸಚಿವ ತುಷಾರ್‌ಕಾಂತಿ ಬೆಹೆರಾ ಉಪಸ್ಥಿತರಿದ್ದರು.

ದೇಶದ ಪ್ರಮುಖ ಹಾಕಿ ಕೇಂದ್ರವಾಗಿ ಬೆಳೆಯುತ್ತಿರುವ ಭುವನೇಶ್ವರದಲ್ಲಿ 2018ರ ವಿಶ್ವಕಪ್‌ ಹಾಕಿ ಪಂದ್ಯಾವಳಿ ಯಶಸ್ವಿಯಾಗಿ ನಡೆದಿತ್ತು. ಅಂದು ಬೆಲ್ಜಿಯಂ ಚಾಂಪಿಯನ್‌ ಆಗಿತ್ತು. 2017ರ ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, ಅದೇ ವರ್ಷದ ಎಫ್ಐಎಚ್‌ ಹಾಕಿ ವರ್ಲ್ಡ್ ಲೀಗ್‌ ಫೈನಲ್‌, 2019ರ ಎಫ್ಐಎಚ್‌ ಪುರುಷರ ಸೀರಿಸ್‌ ಫೈನಲ್ಸ್‌, ಇತ್ತೀಚಿನ ಎಫ್ಐಎಚ್‌ ಹಾಕಿ ಒಲಿಂಪಿಕ್‌ ಅರ್ಹತಾ ಪಂದ್ಯಾವಳಿಗಳೆಲ್ಲ ಭುವನೇಶ್ವರದಲ್ಲಿ ಧಾರಾಳ ಯಶಸ್ಸು ಕಂಡಿದ್ದವು.

2020ರ ವನಿತೆಯರ ಫಿಫಾ ಅಂಡರ್‌-17 ಕೂಟದ ತಾಣಗಳಲ್ಲಿ ಭುವನೇಶ್ವರ ಕೂಡ ಒಂದಾಗಿದೆ.