- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಕಲಿ ವೆಬ್‍ಸೈಟ್ ಸೃಷ್ಟಿಸಿ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಹುಂಡಿಗೆ ಕನ್ನ

Kolluru [1]

ಉಡುಪಿ : ನಕಲಿ ವೆಬ್‍ಸೈಟ್ ಸೃಷ್ಟಿಸಿ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಹುಂಡಿಗೆ ಕನ್ನ ಹಾಕಿ, ಖದೀಮರು ಭಕ್ತರ ಹಣ ದೋಚಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮತ್ತೊಂದು ದೋಖಾ ಪ್ರಕರಣ ಬಯಲಾಗಿದೆ. ದೂರದ ಊರಿನಿಂದ ದೇವಿಗೆ ಬಂದು ಸೇವೆ ಕೊಡಲು ಸಾಧ್ಯವಾಗದ ನೂರಾರು ಭಕ್ತರು ದೇವಸ್ಥಾನದ ಅಧಿಕೃತ ವೆಬ್‍ಸೈಟ್ ಮೂಲಕ ಸೇವೆಗೆ ದೇಣಿಗೆ ಕೊಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ದೇವಸ್ಥಾನ ವೆಬ್‍ಸೈಟ್ ನಕಲಿ ಮಾಡಿ, ಭಕ್ತರ ಹಣ ದೋಚಿದ್ದಾರೆ. ಹೆಸರಿಗೊಂದು ಪೂಜೆ ಮಾಡಿಸಿ ಪ್ರಸಾದ ಕಳುಹಿಸಿ ಲಕ್ಷಗಟ್ಟಲೆ ಕಾಸು ಜೇಬಿಗಿಳಿಸಿ ಕೈತೊಳೆದುಕೊಂಡಿದ್ದಾರೆ.

ಥೇಟ್ ಕೊಲೂರು ದೇವಸ್ಥಾನದ ವೆಬ್‍ಸೈಟ್ ನಕಲಿ ಮಾಡಿ, ಆಪ್ಶನ್ಸ್, ಫೋಟೋಗಳು, ಸೇವಾ ವಿವರಗಳೆಲ್ಲಾ ಒಂದೇ ರೀತಿ ಇರುವ ಹಾಗೆ ಖದೀಮರು ನಕಲಿ ವೆಬ್‍ಸೈಟ್ ರೂಪಿಸಿದ್ದಾರೆ. ಇದನ್ನು ನಂಬಿ ಭಕ್ತರು ದೇವರ ಸೇವೆಗೆ ಈ ವೆಬ್‍ಸೈಟ್‍ನಲ್ಲಿ ಪೂಜೆ ಬುಕ್ ಮಾಡುತ್ತಿದ್ದರು. ಆದರೆ ಹಣ ಮಾತ್ರ ಆನ್‍ಲೈನ್ ಮೂಲಕ ದೇವಸ್ಥಾನದ ಅಕೌಂಟಿಗೆ ಹೋಗದೇ ದೇವಸ್ಥಾನದ ಅರ್ಚಕರೊಬ್ಬರ ಖಾಸಗಿ ಖಾತೆಗೆ ಹೋಗಿ ಬೀಳುತ್ತಿತ್ತು.

ಈ ವಿಚಾರ ದೇವಸ್ಥಾನದ ಹೊಸ ಇಒ ಗಮನಕ್ಕೆ ಬಂದಿದ್ದು, ಇಒ ಸೆನ್(ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಅಪರಾಧ ಠಾಣೆ) ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಶುರು ಮಾಡಿದಾಗ ದೇವಸ್ಥಾನದಲ್ಲೇ ಅರ್ಚಕ ವೃತ್ತಿ ಮಾಡುತ್ತಿರುವವರೇ ನಕಲಿ ವೆಬ್‍ಸೈಟ್‍ನ ಅಡ್ಮಿನ್ ಅನ್ನೋದು ಪೊಲೀಸರಿಗೆ ಗೊತ್ತಾಗಿದ್ದು, ತನಿಖೆ ಪೂರ್ಣಗೊಂಡ ಕೂಡಲೇ ದೇವರ ಹಣ ದೋಚಿದ ಕಳ್ಳ ಸಿಕ್ಕಿಹಾಕಿಕೊಳ್ಳುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು, ಆನ್‍ಲೈನ್ ವ್ಯವಹಾರ ಮಾಡುವ ಮಂದಿ ‘ಹೂ ಇಸ್ ಇಟ್’ ಅನ್ನೋ ವೆಬ್‍ಸೈಟ್ ಬಳಸಿ ಅದರಲ್ಲಿ ಯಾವುದು ಅಧಿಕೃತ ಯಾವುದು ಅನಧಿಕೃತ ವೆಬ್‍ಸೈಟ್ ಎಂಬ ಬಗ್ಗೆ ಪಿನ್ ಟು ಪಿನ್ ಡೀಟೇಲ್ಸ್ ಇರುತ್ತದೆ. ಆನ್ ಲೈನ್ ಟ್ರಾನ್ಸಾಕ್ಷನ್ ಮಾಡುವವರು ಸರಿಯಾಗಿ ಪರಿಶೀಲಿಸಿ ದೇವಸ್ಥಾನದ ಆಗುಹೋಗುಗಳ ಬಗ್ಗೆ ಎಲ್ಲಾ ಮಾಹಿತಿ ಇರುವವರೇ ಇದರ ಹಿಂದೆ ಇದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸಂಪೂರ್ಣ ತನಿಖೆಯಾದ ಬಳಿಕ ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮೂರು ವರ್ಷದ ಹಿಂದೆ ಕೊಲ್ಲೂರಮ್ಮನಿಗೆ ಬಂದ ಚಿನ್ನ, ಬೆಳ್ಳಿಯ ಆಭರಣಗಳನ್ನು ದೇವಸ್ಥಾನದ ಸಿಬ್ಬಂದಿ ಅಡವಿಟ್ಟು, ಮಾರಾಟ ಮಾಡಿ ಸಿಕ್ಕಿಬಿದ್ದಿದ್ದರು. ದೇವರು ಮತ್ತು ಭಕ್ತರ ನಡುವೆ ಕೊಂಡಿಯಾಗಬೇಕಾದ ಅರ್ಚಕರು, ಸಿಬ್ಬಂದಿ ಭಗವಂತನ ಕಾಸು ದೋಚುತ್ತಿರುವುದು ವಿಪರ್ಯಾಸ.

ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ರಾಜ್ಯದ ಎರಡನೇ ಅತೀ ಹೆಚ್ಚು ವರಮಾನವಿರುವ ದೇವಸ್ಥಾನ ಎಷ್ಟು ವರ್ಷದಿಂದ ಕೊಳ್ಳೆಯಾಗುತ್ತಿದೆ ಅಂತ ತನಿಖೆ ಮಾಡಿಸಬೇಕಿದೆ.