ಕೆ ರಾಮ್ ನಾರಾಯಣ್ ನಿರ್ದೇಶನದ ‘ಸ್ನೇಹಿತರು’ ಚಿತ್ರದ ಮೊದಲ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಾಥ ಮಕ್ಕಳನ್ನು ಪ್ರೀತಿಸಬೇಕು, ಅಪ್ಪ-ಅಮ್ಮ ಇಲ್ಲದ ಅವರಿಗೆ ಆ ಪ್ರೀತಿಯನ್ನು ತೋರಿಸಿ ಮಾನವೀಯತೆ ಮೆರೆಯಬೇಕು ಅನಾಥ ಮಕ್ಕಳಿಗೆ ಪ್ರೀತಿ, ದಯೆ, ಅನುಕಂಪ ತೋರಿಸದೇ ಬೇರೇನೋ ಮಾಡಲು ಹೊರಟರೆ ಏನೇನಾಗುತ್ತದೆ , ಎಂಬುದು ಕಥೆಯ ಒನ್ ಲೈನ್ ಸ್ಟೋರಿ. ಈ ಚಿತ್ರದಲ್ಲಿ ಹಾಸ್ಯ ಹೇರಳವಾಗಿದೆ. ಸಿನಿಮಾ ನಿರೂಪಣೆ ಎಲ್ಲವೂ ಹಿತಮಿತವಾಗಿ ಸಂಗಮಿಸಿದ್ದು ಪ್ರೇಕ್ಷಕರು ಕೊಟ್ಟ ಕಾಸಿಗೆ ಮೋಸದ ಮಾತೇ ಇಲ್ಲ. ಗೌರವ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಶೇಷ ಡಾನ್ಸ್ ನಲ್ಲಿ ಬಹುಭಾಷಾ ತಾರೆ ನಿಖಿತಾ ತುಕ್ರಲ್ ಕಾಣಿಸಿಕೊಂಡಿರುವ ಬಹುತಾರಾಗಣದ ಕಥೆ, ಚಿತ್ರಕಥೆ, ಸಂಭಾಷಣೆಗಳನೊಳಗೊಂಡಿದೆ.
ಸ್ನೇಹಿತ’ ಎಂಬ ಅನಾಥ ಹುಡುಗನ ಕಥೆ ಹಾಗೂ ‘ಸ್ನೇಹಿತರು’ ಎಂಬ ನಾಲ್ಕು ನಾಯಕರ ಜೀವನ ‘ಜರ್ನಿ’ಯ ವ್ಯಥೆಯನ್ನು ಚಿತ್ರಕಥೆ ಮೂಲಕ ಹೇಳುವ ಚಿತ್ರವೇ ಸ್ನೇಹಿತರು. ಅನಾಥ ಹುಡುಗ, ನಾಲ್ಕು ಖತರ್ನಾಕ್ ನಾಯಕರಿಗೆ ಜೊತೆಯಾಗುವ ಸುಂದರಿ, ಚಿತ್ರದ ಕಥೆಯ ಆರಂಭ ಹಾಗೂ ಅಂತ್ಯಕ್ಕೆ ಕಾರಣವಾಗುವ ಅವಳಿಗೊಬ್ಬ ವೀರ-ಶೂರ-ಹಮ್ಮೀರ ಎಸಿಪಿ, ಕಥೆಯಲ್ಲಿ ಆಟಕ್ಕೆ, ಓಟಕ್ಕೆ ಕಾರಣವಾಗುವ ಕೆಲವು ಪಾತ್ರಗಳ ಮೂಲಕ ವಿಶಿಷ್ಠವಾಗಿ ಹೆಣೆದ ‘ಸ್ನೇಹಿತರು’ ಚಿತ್ರ, ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೆ.
ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಎಲ್ಲದರಲ್ಲೂ ಬಿಗಿಹಿಡಿತ ಕಾಯ್ದುಕೊಂಡಿರುವ ನಿರ್ದೇಶಕರು ಪ್ರೇಕ್ಷಕರ ಮನರಂಜನೆ ಬಗ್ಗೆಯೇ ಎಲ್ಲಕ್ಕಿಂತ ಹೆಚ್ಚು ಒತ್ತುಕೊಟ್ಟಿದ್ದಾರೆ. ಹೀಗಾಗಿ ಯಾವುದೇ ಪಾತ್ರವೂ ಸೊರಗಿಲ್ಲ, ಚಿತ್ರ ಎಲ್ಲೂ ಹೆಚ್ಚಾಗಿ ಬೋರು ಹೊಡೆಸುವುದಿಲ್ಲ.
ಚಿತ್ರಕ್ಕೆ ನಾಯಕರಾಗಿ ನಟಿಸಿರುವ ತರುಣ್ ಚಂದ್ರ, ವಿಜಯರಾಘವೇಂದ್ರ, ರವಿಶಂಕರ್ ಗೌಡ ಹಾಗೂ ಸೃಜನ್ ಲೋಕೇಶ್ ಈ ನಾಲ್ವರೂ ಚೆನ್ನಾಗಿ ನಟಿಸಿದ್ದಾರೆ. ನಾಯಕಿ ಪ್ರಣೀತಾ ನಟನೆಯೂ ಮೆಚ್ಚುವಂತಿದೆ. ಸಮರ್ಥ ಎಸಿಪಿ ಪಾತ್ರದಲ್ಲಿ ಸಖತ್ ಮಿಂಚಿರುವ ದರ್ಶನ್, ಚಿತ್ರದ ಆರಂಭ ಹಾಗೂ ಅಂತ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಮಾತ್ರವಲ್ಲದೇ ಸಂಪೂರ್ಣ ಚಿತ್ರಕ್ಕೂ ನ್ಯಾಯ ಒದಗಿಸಿದ್ದಾರೆ.ವಿಶೇಷ ಡಾನ್ಸ್ ನಲ್ಲಿ ಕಾಣಿಸಕೊಂಡಿರುವ ನಿಖಿತಾ, ಚೆನ್ನಾಗಿ ಮೈಬಳುಕಿಸಿದ್ದಾರೆ. ಸ್ನೇಹಿತರು ಕೇಂದ್ರಬಿಂದು ಮಾ ಸ್ನೇಹಿತ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಚೆನ್ನಾಗಿ ನಟಿಸುವಲ್ಲಿ ಸಫಲರಾಗಿದ್ದಾರೆ.
ಪೋಷಕ ಪಾತ್ರಗಳಲ್ಲಿ ಕಾಣಿಸಕೊಂಡಿರುವ ನಾಗರಾಜ್ ಅರಸ್, ರಮೇಶ್ ಭಟ್, ಗಿರಿಜಾ ಲೋಕೇಶ್ ಹಾಗೂ ಪುಟ್ಟಪುಟ್ಟ ಪಾತ್ರಗಳಲ್ಲಿ ಬಂದು ಹೋಗುವ ಬುಲೆಟ್ ಪ್ರಕಾಶ್, ಸಾಧುಕೋಕಿಲ, ಶೋಭರಾಜ್, ಧರ್ಮ ಮುಂತಾದವರ ಪಾತ್ರ ಪೋಷಣೆ ಸೂಪರ್. ವಿ ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಚೆನ್ನಾಗಿವೆ. ಸೋನು ನಿಗಮ್ ಹಾಡಿರುವ ‘ಬಡಪಾಯಿ ಹೃದಯಕ್ಕೆ…’ಹಾಡು ಗಮನಸೆಳೆಯುತ್ತದೆ. ಎಂಆರ್ ಸೀನು ಛಾಯಾಗ್ರಹಣ, ಗಣೇಶ್ ಎಂ ಸಂಕಲನ ಹಿತಮಿತವಾಗಿದೆ. ಒಟ್ಟಿನಲ್ಲಿ ನಿರ್ಮಾಪಕ ಸೌಂದರ್ಯ ಆರ್ ಜಗದೀಶ್ ಒಂದು ಒಳ್ಳೆಯ ಮನರಂಜನಾತ್ಮಕ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
Click this button or press Ctrl+G to toggle between Kannada and English