- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಸ್ತೆ ದುರಸ್ತಿಗೆ ಆಗ್ರಹ : ಕರಿಕೆ ಭಾಗಶಃ ಬಂದ್

Madikeri [1]

ಮಡಿಕೇರಿ : ಕೊಡಗಿನ ಗಡಿಗ್ರಾಮ ಕರಿಕೆ ರಸ್ತೆ ಅಭಿವೃದ್ಧಿಗಾಗಿ ಒತ್ತಾಯಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾ.ಪಂ ಅಧ್ಯಕ್ಷರು ಕರೆ ನೀಡಿದ್ದ ಕರಿಕೆ ಬಂದ್ ಭಾಗಶಃ ಯಶಸ್ವಿಯಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಬೆಳಗ್ಗೆ ಬಲತ್ಕಾರದ ಬಂದ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ವಾಹನ ಸಂಚಾರವಿಲ್ಲದೆ ಪರದಾಡುವಂತ್ತಾಯಿತು. ಗ್ರಾಮ ಪಂಚಾಯತಿ, ಸಹಕಾರ ಸಂಘಗಳನ್ನು ಬಲವಂತದಿಂದ ಮುಚ್ಚಿಸಿದಾಗ ಕೆಲವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಧ್ಯಾಹ್ನ ಎರಡು ಗಂಟೆಗೆ ಕರಿಕೆ -ಸುಳ್ಯ ಸಂಚರಿಸುವ ಖಾಸಗಿ ಬಸ್ ಗೆ ತಡೆಯೊಡ್ಡಿದಾಗ ಗ್ರಾಮಸ್ಥರು ಹಾಗೂ ಬಿಜೆಪಿ ಮುಖಂಡರು ಮಧ್ಯ ಪ್ರವೇಶಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಪಂಚಾಯತಿ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೋಲಿಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ ಅವರ ನೇತೃತ್ವದಲ್ಲಿ ಭಾಗಮಂಡಲ ಠಾಣಾಧಿಕಾರಿ ಮಹದೇವ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಗ್ರಾ.ಪಂ ಅಧ್ಯಕ್ಷ ಬಾಲಚಂದ್ರ ನಾಯರ್, ವಲಯ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ದೇವರಾಜ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್, ಹರಿಪ್ರಸಾದ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಶರಣ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Madikeri [2]

ಈ ಸಂದರ್ಭ ಮಾತನಾಡಿದ ಬಿ.ಆರ್.ರಮಾನಾಥ್ ರಸ್ತೆ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೊಡಗಿನ ಗಡಿಭಾಗವಾದ ಕರಿಕೆ ಗ್ರಾಮ ಕೇರಳದ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಂತಿದ್ದು, ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸಮೀಪದಲ್ಲಿದೆ. ಕರಿಕೆಯಿಂದ ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಸುಮಾರು 70 ಕಿ.ಮೀ. ದೂರವಿದ್ದರೆ, ಸುಳ್ಯ ತಾಲೂಕು ಕೇಂದ್ರ ಕೇವಲ 22 ಕಿ.ಮೀ. ಅಂತರದಲ್ಲಿದೆ. ಕೇರಳದ ಪ್ರಮುಖ ಪಟ್ಟಣಗಳಲ್ಲೊಂದಾದ ಕಾಂಞಂಗಾಡ್‌ಗೆ ಕೇವಲ 20 ಕಿ.ಮೀ ಅಂತರವಿದೆ. ಆದರೆ ಕೊಡಗು ಜಿಲ್ಲೆಗೆ ಸೇರಿದ ಕರಿಕೆ ಗ್ರಾಮ ಪಂಚಾಯಿತಿಯ ಜನರು ತಮ್ಮ ಕೆಲಸ ಕಾರ್ಯಗಳಿಗೆ 70 ಕಿ.ಮೀ. ದೂರದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಪ್ರತಿನಿತ್ಯ ಸಂಚರಿಸಬೇಕಾಗಿದ್ದು, ಅವರ ಸಂಚಾರಕ್ಕೆ ಇರುವ ಅತಿ ಹತ್ತಿರದ ಸಂಪರ್ಕ ರಸ್ತೆಯೆಂದರೆ ಅದು ಭಾಗಮಂಡಲ-ಕರಿಕೆ ರಸ್ತೆ.

ಹೆಸರಿಗೆ ಭಾಗಮಂಡಲ-ಕರಿಕೆ ರಸ್ತೆ ಅಂತರರಾಜ್ಯಗಳ ಸಂಪರ್ಕ ರಸ್ತೆಯಾಗಿದ್ದರೂ, ಲೋಕೋಪಯೋಗಿ ಇಲಾಖೆಯ ದಾಖಲೆಗಳ ಪ್ರಕಾರ ಇದು ಜಿಲ್ಲಾ ಮುಖ್ಯ ರಸ್ತೆ (ಎಂಡಿಆರ್) ಎಂದೇ ಪರಿಗಣಿಸಲ್ಪಟ್ಟಿದೆ. ಆದರೆ ಈ ರಸ್ತೆಗೆ ಕಾಯಕಲ್ಪ ನೀಡುವ ಬಗ್ಗೆ ಲೋಕೋಪಯೋಗಿ ಇಲಾಖೆಯಾಗಲಿ, ಕರ್ನಾಟಕ ರಾಜ್ಯ ಸರಕಾರವಾಗಲಿ ಆಸಕ್ತಿ ತೋರುತ್ತಿಲ್ಲ ಎಂಬುದಕ್ಕೆ ಈ ರಸ್ತೆಯ ಇಂದಿನ ದುಸ್ಥಿತಿಯೇ ಉದಾಹರಣೆಯಾಗಿದೆ ಎಂದು ರಮಾನಾಥ್ ಅಸಮಾಧಾನ ವ್ಯಕ್ತಪಡಿಸಿದರು.