ಮಡಿಕೇರಿ : ನಗರದ ರಸ್ತೆಗಳ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವೀರನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಡಿ.15 ರೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ ಮಡಿಕೇರಿ ನಗರ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಳೆಗಾಲ ಕಳೆದು ಬಿಸಿಲಿನ ವಾತಾವರಣ ಮೂಡಿದ್ದರೂ ರಸ್ತೆ ದುರಸ್ತಿಯ ಬಗ್ಗೆ ನಗರಸಭೆ ಕಾಳಜಿ ತೋರುತ್ತಿಲ್ಲ. ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಹಾನಿಯಿಂದ ಬೇಸತ್ತು ಹೋಗಿರುವ ಮಡಿಕೇರಿ ಜನತೆ ಇದೀಗ ಹದಗೆಟ್ಟ ರಸ್ತೆಯಿಂದಾಗಿ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಕಳೆದ ಎರಡು ತಿಂಗಳಿನಿಂದ ನಗರದಲ್ಲಿ ಉತ್ತಮ ವಾತಾವರಣವಿದ್ದರೂ ರಸ್ತೆಗಳ ಡಾಮರೀಕರಣಕ್ಕೆ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಯಾವುದೇ ಆಸಕ್ತಿ ತೋರಿಲ್ಲ. ನಿರಂತರವಾಗಿ ಮಳೆಯ ನೆಪವೊಡ್ಡುತ್ತಾ ಬಂದಿರುವ ಅಧಿಕಾರಿಗಳು ಡಿಸೆಂಬರ್ ತಿಂಗಳಿನಲ್ಲೂ ಕಾಮಗಾರಿ ಆರಂಭಿಸುವ ಲಕ್ಷಣ ಕಾಣುತ್ತಿಲ್ಲ. ನಗರದ ಹೃದಯ ಭಾಗದ ಮಂಗೇರಿರ ಮುತ್ತಣ್ಣ ವೃತ್ತದ ಬಳಿ ರಸ್ತೆ ಸಂಪೂರ್ಣವಾಗಿ ಹಳ್ಳಕೊಳ್ಳಗಳಾಗಿದೆ. ಇದೇ ಮಾರ್ಗದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ವಾಹನಗಳಲ್ಲಿ ಸಂಚರಿಸಿದರೂ ರಸ್ತೆ ಅವ್ಯವಸ್ಥೆಯ ಅನುಭವವಾಗದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ಹರೀಶ್ ಜಿ.ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರಸಭೆಗೆ ಬಿಡುಗಡೆಯಾಗಿರುವ ರಸ್ತೆಗಳ ಅಭಿವೃದ್ಧಿಯ ಅನುದಾನ ಮತ್ತು ಮಳೆಹಾನಿ ಪರಿಹಾರದ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿರುವ ಅವರು, ನಗರದ ಎಲ್ಲಾ ರಸ್ತೆಗಳನ್ನು ಡಾಮರೀಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಗುಂಡಿ ಮುಚ್ಚುವ ಮೂಲಕ ತೇಪೆ ಕಾರ್ಯಕ್ಕೆ ಮುಂದಾದರೆ ಕಾಮಗಾರಿಗೆ ತಡೆಯೊಡ್ಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಮನವಿಗಳಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವುದರಿಂದ ಮಡಿಕೇರಿ ನಗರ ಬಂದ್‌ಗೆ ಕರೆ ನೀಡಲಾಗುವುದು. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಡಿ15 ರ ನಂತರ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಭರವಸೆ ನೀಡಿದ್ದರು.
ಒಂದು ವೇಳೆ ಭರವಸೆ ಹುಸಿಯಾದರೆ ಬಂದ್ ನಡೆಸುವುದು ಖಚಿತ. ಚೇಂಬರ್ ಆಫ್ ಕಾಮರ್ಸ್, ಆಟೋ ಮಾಲೀಕರ ಮತ್ತು ಚಾಲಕರ ಸಂಘ, ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘ, ಖಾಸಗಿ ಬಸ್ ಮಾಲೀಕರ ಮತ್ತು ಕಾರ್ಮಿಕರ ಸಂಘ ಸೇರಿದಂತೆ ಎಲ್ಲಾ ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳ ಸಹಕಾರ ಕೋರಿ ಸಾರ್ವಜನಿಕರ ಬೆಂಬಲದೊಂದಿಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೆ ನಗರಸಭೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.
ನಗರದ ಮುಖ್ಯ ರಸ್ತೆಗಳು ಹಾಗೂ ವಿವಿಧ ಬಡಾವಣೆಗಳ ರಸ್ತೆ ಅಭಿವೃದ್ಧಿಗಾಗಿ 2018-19 ನೇ ಸಾಲಿನಲ್ಲಿ ನಗರಸಭೆ ಖರ್ಚು ಮಾಡಿರುವ ಹಣವೆಷ್ಟು ಮತ್ತು2019-20ನೇ ಸಾಲಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಎಷ್ಟು ಎನ್ನುವುದನ್ನು ನಗರಸಭೆ ಬಹಿರಂಗ ಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
Click this button or press Ctrl+G to toggle between Kannada and English