ಮುಂಬೈ : ಇತ್ತೀಚೆಗಷ್ಟೇ ಪಾಪಿ ಮಗಳೊಬ್ಬಳು ತನ್ನ ತಂದೆಯನ್ನು ಕೊಲೆಗೈದು ಸೂಟ್ ಕೇಸ್‍ನಲ್ಲಿ ತುಂಬಿ ನದಿಗೆ ಎಸೆದ ಪ್ರಕರಣದ ಬೆನ್ನಲ್ಲೇ ಇದೀಗ ತಂದೆಯೇ ಮಗಳನ್ನು ಕೊಂದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
22 ವರ್ಷದ ಮಗಳನ್ನು ಕೊಲೆಗೈದ 47 ವರ್ಷದ ಪಾಪಿ ತಂದೆಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಯುವಕನೊಂದಿಗಿನ ಪ್ರೇಮವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅರವಿಂದ್ ತಿವಾರಿ ತನ್ನ ಮಗಳಾದ ಫ್ರಿನ್ಸಿಯನ್ನು ಹೊಡೆದು ಕೊಂದು ಬಳಿಕ ಆಕೆಯ ಶವವನ್ನು ಸೂಟ್ ಕೇಸಿನಲ್ಲಿ ತುಂಬಿ ಬಿಸಾಡಲೆಂದು ಶನಿವಾರ ರಾತ್ರಿ ಆಟೋದಲ್ಲಿ ತೆರಳುತ್ತಿದ್ದನು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ದುರ್ದೈವಿ ಯುವತಿ ಪದವೀಧರೆಯಾಗಿದ್ದು, 6 ತಿಂಗಳ ಹಿಂದೆಯಷ್ಟೇ ಉತ್ತರಪ್ರದೇಶಕ್ಕೆ ಸಮೀಪವಿರುವ ಜೌನ್ಪುರ್ ಸಿಟಿಯಿಂದ ಬಂದಿದ್ದಳು. ಅಲ್ಲದೆ ಆಕೆ ಕೆಲಸ ಮಾಡುತ್ತಿರುವ ಭಂದೂಪ್ ಕಂಪನಿಯಲ್ಲಿ ಸಹೋದ್ಯೋಗಿಯ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಯುವಕ ಮುಸ್ಲಿಂ ಆಗಿದ್ದು, ಮದುವೆಯಾಗಲು ರೆಡಿಯಾಗಿದ್ದಳು. ಆದರೆ ಈ ವಿಚಾರ ತಿಳಿದ ತಂದೆ, ಆತನ ಜೊತೆಗಿನ ಮದುವೆಯನ್ನು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ತಂದೆ, ಮಗಳನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರಿಗೆ ಇದೂವರೆಗೂ ಆಕೆಯ ದೇಹದ ಪೂರ್ತಿ ಭಾಗ ಸಿಗಲಿಲ್ಲ. ಹೀಗಾಗಿ ಅದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಆರೋಪಿ ತಿವಾರಿ ಮಲಾಡ್ ನಲ್ಲಿರುವ ಟ್ರಾವೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪೊಲೀಸರ ಪ್ರಕಾರ, ಮುಸ್ಲಿಂ ಯುವಕನೊಂದಿಗಿನ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ತನ್ನ ಮಗಳ ಜೊತೆ ಕ್ಯಾತೆ ತೆಗೆದಿದ್ದನು. ತನಿಖೆಯ ಸಂದರ್ಭದಲ್ಲಿಯೂ ಆತ, ನನಗೆ ನನ್ನ ಮಗಳು ಬೇರೆ ಸಮುದಾಯದ ಯುವಕನೊಂದಿಗೆ ಸಂಬಂಧ ಬೆಳೆಸಿರುವುದು ಇಷ್ಟವಾಗಿರಲಿಲ್ಲ. ಆದರೆ ಆಕೆ ಮಾತ್ರ, ತಾನು ಅತನನ್ನೇ ಮದುವೆಯಾಗುವುದೆಂದು ಹಠ ಹಿಡಿದಿದ್ದಳು. ಇದರಿಂದ ಸಿಟ್ಟಿಗೆದ್ದು ಆಕೆಯನ್ನು ಕೊಲೆ ಮಾಡಲು ತೀರ್ಮಾನ ಮಾಡಿದೆ ಎಂದು ಪೊಲೀಸರ ಬಳಿ ತಿಳಿಸಿದ್ದಾನೆ.
ತಿವಾರಿ ಹಾಗೂ ಮೃತ ಮಗಳು ತಿಟ್ ವಾಲಾದ ಇಂದಿರಾ ನಗರದಲ್ಲಿರುವ ಪ್ರದೇಶದಲ್ಲಿ ವಾಸವಾಗಿದ್ದರು. ಮೃತ ಪ್ರಿನ್ಸಿಯ ತಾಯಿ ಹಾಗೂ ಮೂವರು ಸಹೋದರಿಯರು ಉತ್ತರಪ್ರದೇಶ ಜೌನ್ಪುರದಲ್ಲಿ ವಾಸವಾಗಿದ್ದಾರೆ. ಇತ್ತ ತಂದೆ ಜೊತೆ ವಾಸವಾಗಿದ್ದ ಪ್ರಿನ್ಸಿ, ಶುಕ್ರವಾರ ರಾತ್ರಿ ಮುಸ್ಲಿಂ ಯುವಕನ ಜೊತೆ ಮದುವೆಯ ಪ್ರಸ್ತಾಪವನ್ನು ಅಪ್ಪನ ಮುಂದಿಟ್ಟಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ತಂದೆ ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮಗೆ ಇದೂವರೆಗೂ ಆರೋಪಿ ಹೇಗೆ ತನ್ನ ಮಗಳನ್ನು ಕೊಲೆಗೈದಿದ್ದಾನೆ ಎಂಬುದು ತಿಳಿದುಬಂದಿಲ್ಲ. ಆದರೆ ಕೊಲೆಯ ನಂತರ ಆತ ಮಗಳ ದೇಹದ ಭಾಗಗಳನ್ನು ಕತ್ತರಿಸಿದ್ದಾನೆ. ನಂತರ ಸೂಟ್ ಕೇಸಿನಲ್ಲಿ ತುಂಬಿದ್ದಾನೆ. ಹೀಗಾಗಿ ಆತ ತುಂಬಿಸಿದ ಭಾಗಗಳಷ್ಟೇ ನಮಗೆ ದೊರೆತಿದ್ದು, ದೇಹದ ಇತರ ಭಾಗಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹಿರಿಯ ಇನ್ಸ್ ಪೆಕ್ಟರ್ ನಿತಿನ್ ಠಾಕ್ರೆ ವಿವರಿಸಿದ್ದಾರೆ.
ಮಗಳ ಕತ್ತರಿಸಿದ ದೇಹದೊಂದಿಗೆ ತಂದೆ ರಿಕ್ಷಾದಲ್ಲಿ ತಿಟ್ ವಾಲಾ ರೈಲ್ವೆ ನಿಲ್ದಾಣದತ್ತ ತೆರಳಿದ್ದಾನೆ. ಅಲ್ಲಿಂದ ಆತ ಕಲ್ಯಾಣ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದು, ಮತ್ತೆ ಆಟೋ ಹಿಡಿದುಕೊಂಡು ಭಿವಾಂಡಿ ಪ್ರದೇಶಕ್ಕೆ ತೆರಳಿ, ಅಲ್ಲಿ ಮೃತ ದೇಹವನ್ನು ಬಿಸಾಕುವ ಯೋಜನೆ ಹಾಕಿಕೊಂಡಿದ್ದನು. ಈ ಮಧ್ಯೆ ಆಟೋ ಚಾಲಕ ಸೂಟ್ ಕೇಸಿನಲ್ಲಿ ಏನಿದೆ ತುಂಬಾ ವಾಸನೆ ಬರುತ್ತಿದೆಯಲ್ವಾ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಭಯಭೀತನಾದ ತಿವಾರಿ, ಸೂಟ್ ಕೇಸನ್ನು ಆಟೋದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಇದರಿಂದ ಸಂಶಯಗೊಂಡ ಆಟೋ ಚಾಲಕ, ಇತರ ಆಟೋ ಡ್ರೈವರುಗಳಿಗೆ ಮಾಹಿತಿ ನೀಡುತ್ತಾರೆ. ಇತ್ತ ಕೂಡಲೇ ಸ್ಥಳೀಯ ಮಹಾತ್ಮ ಫುಲೆ ಪೊಲೀಸ್ ಠಾಣೆಗೂ ಮಾಹಿತಿ ರವಾನಿಸುತ್ತಾರೆ. ಹೀಗಾಗಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸೂಟ್ ಕೇಸ್ ತೆರೆದು ನೋಡಿದಾಗ ತುಂಡು ತುಂಡಾದ ದೇಹದ ಭಾಗಗಳು ಪತ್ತೆಯಾಗಿವೆ. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಿಕೊಳ್ಳುತ್ತಾರೆ.
ಪ್ರಕರಣವನ್ನು ಕೈಗೆತ್ತಿಗೊಂಡ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ಆರಂಭಿಸಿದ್ದು, ರೈಲ್ವೆ ನಿಲ್ದಾಣಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಈ ಮೂಲಕ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ನಂತರ ಆರೋಪಿ ಮನೆಗೆ ತೆರಳಿ ಮಗಳ ಬಗ್ಗೆ ಕೇಳಿದ್ದಾರೆ. ಮೊದಲು ಏನೇನೂ ಸಬೂಬು ಹೇಳಿದ ತಿವಾರಿ ಕೊನೆಗೆ ತನ್ನ ತಪ್ಪನ್ನು ಪೊಲಿಸರ ಮುಂದೆ ಒಪ್ಪಿಕೊಂಡನು. ಸದ್ಯ ಪೊಲೀಸರು ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
Click this button or press Ctrl+G to toggle between Kannada and English